ಸಮಗ್ರ ನ್ಯೂಸ್: ನಡು ರಸ್ತೆಯಲ್ಲಿಯೇ ಮೊಮ್ಮಗನೋರ್ವ ಸ್ವಂತ ಅಜ್ಜಿಯ ತಲೆ ಮೇಲೆ ಸೈಜ್ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ, ಶಿವಮೊಗ್ಗ ನಗರದ ಮಿಳಘಟ್ಟ ಸಮೀಪದ ಆನಂದರಾವ್ ಬಡಾವಣೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಸುಶೀಲಮ್ಮ (65) ಕೊಲೆಗೀಡಾದವರು, ಕಿಶೋರ (28) ಕೊಲೆಗೈದ ಆರೋಪಿ ಎಂದು ತಿಳಿದು ಬಂದಿದೆ.
ಆರೋಪಿ ಮೊಮ್ಮಗ ಗಾಂಜಾ ವ್ಯಸನಿಯಾಗಿದ್ದ. ಈ ಬಗ್ಗೆ ಅಜ್ಜಿ ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದರು. ಇದರಿಂದ ಆಕ್ರೋಶಗೊಂಡ ಮೊಮ್ಮಗ ಕಿಶೋರ ರಸ್ತೆಯಲ್ಲಿಯೇ ಅಜ್ಜಿಯ ತಲೆ ಮೇಲೆ ಸೈಜ್ ಕಲ್ಲನ್ನು ಎತ್ತಿ ಹಾಕಿದ್ದ. ತೀವ್ರ ರಕ್ತಸ್ರಾವದಿಂದ ಸುಶೀಲಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ದೊಡ್ಡಪೇಟೆ ಠಾಣೆಯ ಪೊಲೀಸ್ ಠಾಣೆ ಇನ್ಸ್ ಸ್ಪೆಕ್ಟರ್ ಮತ್ತು ಸಿಬ್ಬಂದಿ, ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು.
ಆರೋಪಿಯು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಜಪೇಯಿ ಬಡಾವಣೆಯಲ್ಲಿ ಇರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆತನನ್ನು ಹಿಡಿಯಲು ತೆರಳಿದ್ದ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ಮಾಡಿದ್ದಾನೆ. ಕಿಶೋರ್ ತನ್ನ ಬಳಿಯಿದ್ದ ಚಾಕುವಿನಿಂದ ಪೊಲೀಸ್ ಸಿಬ್ಬಂದಿ ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್ಸ್ಪೆಕ್ಟರ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡ ಸಿಬ್ಬಂದಿ ಗಣೇಶ್ ಹಾಗೂ ಆರೋಪಿ ಕಿಶೋರನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಎಸ್ಪಿ ನಿಖಿಲ್ ಬಿ ಆಸ್ಪತ್ರೆಗೆ ಭೇಟಿಕೊಟ್ಟು ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ.







