ಸಮಗ್ರ ನ್ಯೂಸ್: ಭಾರತದ ಗ್ರಾಮೀಣಾಭಿವೃದ್ಧಿ ಪಥದಲ್ಲಿ ಬದಲಾವಣೆಯೊಂದಕ್ಕೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ಕಳೆದ ಎರಡು ದಶಕಗಳಿಂದ ದೇಶದ ಹಳ್ಳಿಗಳ ಆರ್ಥಿಕ ಶಕ್ತಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ – 2005) ಅಧಿಕೃತವಾಗಿ ರದ್ದಾಗಲಿದೆ. ಇದರ ಬದಲಿಗೆ ಕೇಂದ್ರ ಸರ್ಕಾರವು ರೂಪಿಸಿರುವ ನೂತನ ವಿಕಸಿತ ಭಾರತ್ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಅಥವಾ ವಿಬಿ-ಜಿ-ರಾಮ್ ಜಿ (VB-G-RAM ಜಿ) ಕಾಯ್ದೆ 2025 ಇಂದಿನಿಂದ (ಜುಲೈ 1) ದೇಶಾದ್ಯಂತ ಜಾರಿಗೆ ಬರಲಿದೆ.
ವಿಕಸಿತ ಭಾರತ 2047ರ ಮಹತ್ವಾಕಾಂಕ್ಷಿ ಗುರಿಯತ್ತ ಸಾಗಲು ಈ ಹೊಸ ಕಾಯ್ದೆ ಮೈಲಿಗಲ್ಲಾಗಲಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಈ ಹೊಸ ಕಾಯ್ದೆಯ ನಿಯಮಾವಳಿಗಳಿಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಆದಾಗ್ಯೂ, ರಾಜ್ಯದ ಗ್ರಾಮೀಣ ಕಾರ್ಮಿಕರ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಜುಲೈ 1 ರಿಂದಲೇ ಕಾಯ್ದೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಹೊಸ ಕಾಯ್ದೆಯು ಗ್ರಾಮೀಣ ಕಾರ್ಮಿಕರಿಗೆ ಕೆಲವು ಪ್ರಮುಖ ಸೌಲಭ್ಯಗಳನ್ನು ಕಾನೂನುಬದ್ಧವಾಗಿ ಖಾತರಿಪಡಿಸಿದೆ.
ಹೆಚ್ಚುವರಿ ದಿನಗಳ ಉದ್ಯೋಗ:
ಹಳೆಯ ನರೇಗಾ ಯೋಜನೆಯಡಿ ವರ್ಷಕ್ಕೆ 100 ದಿನಗಳ ಉದ್ಯೋಗ ಭರವಸೆ ಇತ್ತು. ಆದರೆ, ನೂತನ ವಿಬಿ-ಜಿ-ರಾಮ್ ಜಿ ಯೋಜನೆಯಲ್ಲಿ ಪ್ರತಿ ಗ್ರಾಮೀಣ ಕುಟುಂಬದ ವಯಸ್ಕ ಸದಸ್ಯರಿಗೆ ವರ್ಷಕ್ಕೆ 125 ದಿನಗಳ ಕೂಲಿ ಉದ್ಯೋಗವನ್ನು ಕಡ್ಡಾಯಗೊಳಿಸಲಾಗಿದೆ.
ಸಕಾಲಕ್ಕೆ ವೇತನ, ಇಲ್ಲದಿದ್ದರೆ ಪರಿಹಾರ:
ಮಸ್ಟರ್ ರೋಲ್ ಮುಕ್ತಾಯಗೊಂಡ 15 ದಿನಗಳ ಒಳಗೆ ನೇರ ಲಾಭ ವರ್ಗಾವಣೆ (DBT) ಮೂಲಕವೇ ವೇತನ ಪಾವತಿಸುವುದು ಕಡ್ಡಾಯ. ವಿಳಂಬವಾದಲ್ಲಿ ಕಾರ್ಮಿಕರಿಗೆ ಪರಿಹಾರ ಪಡೆಯುವ ಹಕ್ಕಿರುತ್ತದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಉದ್ಯೋಗ ನೀಡಲು ಸರ್ಕಾರ ವಿಫಲವಾದರೆ ನಿರುದ್ಯೋಗ ಭತ್ಯೆ ನೀಡುವುದು ಕಡ್ಡಾಯವಾಗಿದೆ.
ಹಳೇ ಜಾಬ್ ಕಾರ್ಡ್‌ಗಳೇ ಮಾನ್ಯ:
ಹೊಸ ಕಾರ್ಡ್‌ಗಳನ್ನು ನೀಡುವವರೆಗೆ ಸದ್ಯ ಚಾಲ್ತಿಯಲ್ಲಿರುವ ಇ-ಕೆವೈಸಿ (e-KYC) ದೃಢೀಕೃತ ಎಂಜಿಎನ್‌ಆರ್‌ಎಜಿಎ ಜಾಬ್ ಕಾರ್ಡ್‌ಗಳೇ ಮಾನ್ಯವಾಗಿರುತ್ತವೆ. ಇ-ಕೆವೈಸಿ ಬಾಕಿ ಇದೆ ಎಂಬ ಕಾರಣಕ್ಕೆ ಯಾರಿಗೂ ಕೆಲಸ ನಿರಾಕರಿಸುವಂತಿಲ್ಲ.
ಕೇಂದ್ರ ಸರ್ಕಾರವು ಈ ಬೃಹತ್ ಯೋಜನೆಗಾಗಿ 2026-27ನೇ ಸಾಲಿಗೆ ಬರೋಬ್ಬರಿ ₹95,692.31 ಕೋಟಿಗಳ ಬಜೆಟ್ ಹಂಚಿಕೆ ಮಾಡಿದೆ. ಇದು ಗ್ರಾಮೀಣ ಉದ್ಯೋಗ ಕಾರ್ಯಕ್ರಮವೊಂದಕ್ಕೆ ಭಾರತದ ಇತಿಹಾಸದಲ್ಲೇ ನೀಡಲಾದ ಅತಿ ದೊಡ್ಡ ಮೊತ್ತವಾಗಿದೆ. ರಾಜ್ಯಗಳ ಪಾಲು ಸೇರಿದರೆ ಈ ಒಟ್ಟು ವೆಚ್ಚವು ₹1.51 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಆದರೆ, ಇಲ್ಲಿಯೇ ರಾಜ್ಯ ಸರ್ಕಾರಗಳಿಗೆ ದೊಡ್ಡ ಆಘಾತ ಎದುರಾಗಿದೆ. ಈ ಹಿಂದೆ ನರೇಗಾ ಯೋಜನೆಯಡಿ ಕೇಂದ್ರ ಮತ್ತು ರಾಜ್ಯದ ಆರ್ಥಿಕ ಪಾಲು 90:10 ಅನುಪಾತದಲ್ಲಿತ್ತು (ಶೇ. 90 ಕೇಂದ್ರ, ಶೇ. 10 ರಾಜ್ಯ). ಆದರೆ, ಹೊಸ ಯೋಜನೆಯಲ್ಲಿ ಇದನ್ನು 60:40 ಕ್ಕೆ ಬದಲಿಸಲಾಗಿದೆ. ಅಂದರೆ, ಯೋಜನೆಯ ಒಟ್ಟು ವೆಚ್ಚದ ಶೇಕಡಾ 40ರಷ್ಟು ಮೊತ್ತವನ್ನು ಇನ್ಮುಂದೆ ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ.








