ಸಮಗ್ರ ನ್ಯೂಸ್: ಹಲವು ದಿನಗಳಿಂದ ಚಾಲಕರಿಗೆ ಅನ್ಯಾಯ ಮಾಡುತ್ತಿರುವ ಉಬರ್ ಕಂಪನಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಆನ್‌ಲೈನ್ ಟ್ಯಾಕ್ಸಿ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದು, ವಿಮಾನ ನಿಲ್ದಾಣದಲ್ಲಿ ಉಬರ್ ಟ್ಯಾಕ್ಸಿ ಸೇವೆಯನ್ನು ಬಂದ್ ಮಾಡಿದ್ದಾರೆ.
ಚಾಲಕರ ಹಲವು ಬೇಡಿಕೆಗಳು, ಸಮಸ್ಯೆಗಳು ಹಾಗೂ ನ್ಯಾಯಯುತ ಹಕ್ಕುಗಳ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ, ಉಬರ್ ಕಂಪನಿಯಿಂದ ಯಾವುದೇ ಸಮರ್ಪಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ಆನ್‌ಲೈನ್ ಟ್ಯಾಕ್ಸಿ ಯೂನಿಯನ್ ಒಕ್ಕೂಟ ತಿಳಿಸಿದೆ.
ಚಾಲಕರ ಆದಾಯದ ಕುಸಿತ, ಹೆಚ್ಚುತ್ತಿರುವ ಕಮಿಷನ್ ಕಡಿತ, ಅನ್ಯಾಯಕರ ನಿಯಮಗಳು ಹಾಗೂ ಚಾಲಕರ ಹಿತಾಸಕ್ತಿಗೆ ವಿರುದ್ಧವಾಗಿರುವ ಹಲವು ನೀತಿಗಳ ಬಗ್ಗೆ ಉಬರ್ ಆಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.
ಮಂಗಳೂರು ಆನ್‌ಲೈನ್ ಟ್ಯಾಕ್ಸಿ ಯೂನಿಯನ್ ಒಕ್ಕೂಟದ ವತಿಯಿಂದ ಪ್ರಕಟಿಸಲಾಗಿರುವ ಈ ಹೋರಾಟವು ಬುಧವಾರ ಬೆಳಗ್ಗೆಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಬರ್ ಸೇವೆ ಸ್ಥಗಿತಗೊಳಿಸುವ ಮೂಲಕ ಆರಂಭವಾಗಲಿದೆ.
ಈ ಹೋರಾಟಕ್ಕೆ ಮಂಗಳೂರಿನ ಎಲ್ಲಾ ಆನ್‌ಲೈನ್ ಟ್ಯಾಕ್ಸಿ ಯೂನಿಯನ್‌ಗಳ ಸಹಮತ ಹಾಗೂ ಬೆಂಬಲವಿದೆ. ಆದ್ದರಿಂದ ಎಲ್ಲಾ ಚಾಲಕರು ಒಗ್ಗಟ್ಟಿನಿಂದ ಯೂನಿಯನ್ ಜೊತೆ ಕೈಜೋಡಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ವಿನಂತಿಸಲಾಗಿದೆ ಎಂದು ಅದು ತಿಳಿಸಿದೆ.
ನಮ್ಮ ನ್ಯಾಯಯುತ ಬೇಡಿಕೆಗಳನ್ನು ಉಬರ್ ಕಂಪನಿ ಈಡೇರಿಸುವವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಉಬರ್ ಸೇವೆ ಬಂದ್ ಮುಂದುವರಿಯಲಿದೆ ಎಂದು ಮಂಗಳೂರು ಆನ್‌ಲೈನ್ ಟ್ಯಾಕ್ಸಿ ಯೂನಿಯನ್ ಒಕ್ಕೂಟ ತಿಳಿಸಿದೆ.







