ಸಮಗ್ರ ನ್ಯೂಸ್: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮಾಜಿ ನಾಯಕನ ಪುತ್ರ, ಆರೋಪಿ ಕೃಷ್ಣ ಜೆ. ರಾವ್ ಹಾಗೂ ಆತನ ಪೋಷಕರನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸಂತ್ರಸ್ತೆ ಹಾಗೂ ಆಕೆಯ 10 ತಿಂಗಳ ಮಗುವಿನ ಜೀವನ ನಿರ್ವಹಣೆಗೆ ಹಣ ಠೇವಣಿ ಇಡಬೇಕೆಂಬ ನ್ಯಾಯಾಲಯದ ಹಿಂದಿನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಕೃಷ್ಣ ರಾವ್
ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಕೃಷ್ಣ ಜೆ. ರಾವ್ ಹಾಗೂ ಆತನ ಪೋಷಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಹೈಕೋರ್ಟ್ ಗರಂ ಆಗಿದೆ. ಮಗು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದೆ ಎಂಬ ಕಾರಣಕ್ಕೆ ಅದನ್ನು ಬದುಕಲು ಯಾವುದೇ ಆಧಾರವಿಲ್ಲದ ಸ್ಥಿತಿಯಲ್ಲಿ ಕೈಬಿಡುತ್ತಿದ್ದೀರಾ? ಅದನ್ನು ನಾವು ಒಪ್ಪುವುದಿಲ್ಲ ಎಂದು ನ್ಯಾಯಾಧೀಶರು ಪ್ರತಿಕ್ರಿಯಿಸಿದ್ದಾರೆ. ಸಂತ್ರಸ್ತೆ ಮತ್ತು ಮಗುವಿನ ಜೀವನೋಪಾಯಕ್ಕಾಗಿ 75,000 ರೂ. ಹಣವನ್ನು ಒಂದು ವಾರದೊಳಗೆ ಠೇವಣಿ ಇಡಲು ಏಪ್ರಿಲ್ 26 ರಂದೇ ಮಧ್ಯಂತರ ಆದೇಶ ನೀಡಿದ್ದರೂ ಅದನ್ನು ಪಾಲಿಸದಿರುವುದಕ್ಕೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿ ಇನ್ನೂ ವಿದ್ಯಾರ್ಥಿಯಾಗಿರುವುದರಿಂದ ನ್ಯಾಯಾಲಯ ವಿಧಿಸಿದ್ದ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, 75,000 ರೂ. ಕೊಡಲು ಸಾಧ್ಯವಾಗುತ್ತಿಲ್ಲವೇ? ನಿಮ್ಮ ತಂದೆ ಇದ್ದಾರಲ್ಲ, ಹಣ ಪಾವತಿಸದಿದ್ದರೆ ಅರ್ಜಿಗಳನ್ನು ವಜಾಗೊಳಿಸಿ, ಮಧ್ಯಂತರ ಆದೇಶವನ್ನು ರದ್ದುಪಡಿಸುತ್ತೇನೆ. ನಿಮ್ಮ ಕೃತ್ಯಗಳಿಂದ ಒಂದು ಮಗು ಜನಿಸಿದೆ, ಅದರ ಜವಾಬ್ದಾರಿಯಿಂದ ನೀವು ಹೇಗೆ ಕೈತೊಳೆದುಕೊಳ್ಳುತ್ತೀರಿ? ಎಂದು ಪ್ರಶ್ನಿಸಿದರು. ಇದೇ ವೇಳೆ ಸಂತ್ರಸ್ತೆ ಪರ ವಕೀಲರು, ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದರೂ ಆರೋಪಿ ಕಡೆಯವರು ಹಣ ವರ್ಗಾಯಿಸಿಲ್ಲ ಮತ್ತು ಮೊದಲ ಕಂತಿನ ಹಣವನ್ನು ಕೋರ್ಟ್‌ನಲ್ಲಿ ಇಟ್ಟಿದ್ದರೂ ಆ ವಿಷಯವನ್ನು ತಮಗೆ ತಿಳಿಸಿಲ್ಲ ಎಂದು ಪೀಠದ ಗಮನಕ್ಕೆ ತಂದರು.
ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಇದು ಪರಸ್ಪರ ಸಮ್ಮತಿಯಿಂದ ನಡೆದ ಸಂಬಂಧವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಈ ಸಂಬಂಧದಿಂದ ಒಂದು ಮಗು ಜನಿಸಿದೆ. ಇದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 69 ರ ಅಡಿಯಲ್ಲಿ ಮದುವೆಯ ಸುಳ್ಳು ಭರವಸೆಗೆ ಸಂಬಂಧಿಸಿದ ಪ್ರಕರಣವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಎರಡೂ ಅರ್ಜಿಗಳು ಖಂಡಿತವಾಗಿಯೂ ವಜಾಗೊಳ್ಳುತ್ತವೆ, ಅರ್ಜಿ ಹಿಂಪಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ಪ್ರಕರಣದ ಮೂಲ ವಿಷಯಗಳ ಕುರಿತು ವಾದ ಮಂಡಿಸಲು ಅರ್ಜಿದಾರರಿಗೆ ಕೊನೆಯ ಅವಕಾಶ ನೀಡಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.







