ದೀದಿಗೆ ಸ್ವಪಕ್ಷೀಯರಿಂದ ಶಾಕ್| 20 ಮಂದಿ ಸಂಸದರಿಂದ ಎನ್ ಡಿಎಗೆ ಬೆಂಬಲ ಘೋಷಣೆ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸೋತ ಬಳಿಕ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, 60 ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ತಿರುಗಿಬಿದ್ದ ಬೆನ್ನಲ್ಲೇ ಇದೀಗ 20 ಸಂಸದರು ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ.

Ad Widget ... .. Ad Widget .

ಸಂಸದರು ತಮ್ಮ ನಿಲುವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ ಎಂದು ಪಕ್ಷದ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಹೇಳಿದ್ದಾರೆ.

Ad Widget

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧವಾಗಿ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಲು ದಿಲ್ಲಿಯಲ್ಲಿ ಇಂಡಿ ಮೈತ್ರಿಕೂಟ ‘ಇಂಡಿಯಾ ಜನಬಂಧನ ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲೇ, ಅತೃಪ್ತ ಸಂಸದರ ಗುಂಪು ಎನ್‌ಡಿಎಗೆ ಬೆಂಬಲ ಸೂಚಿಸಿದೆ.

ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಅವರು, ‘ಜನಾದೇಶವನ್ನು ಗೌರವಿಸಿ, ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದೂ ತಿಳಿಸಿದ್ದಾರೆ. ಈ ಬಗ್ಗೆ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಪ್ರತಿಕ್ರಿಯಿಸಿದ್ದು, ‘ನಾನು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕಿಯಾಗಿ (ಚೀಫ್‌ ವಿಪ್‌) ಮುಂದುವರಿಯುತ್ತಿದ್ದೇನೆ. ಅಲ್ಲದೆ, ತಮ್ಮ ಸಹ ಸಂಸದರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾವು ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ಜತೆಗೆ ನಮ್ಮ ಭವಿಷ್ಯದ ರಾಜಕೀಯ ಹಾದಿಯು ಎನ್‌ಡಿಎ ಜೊತೆ ಹೊಂದಾಣಿಕೆಯಲ್ಲಿರಬೇಕು ಎಂಬುದು ನಮ್ಮ ಇಚ್ಛೆಯಾಗಿದೆ’ ಎಂದರು.

ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತೀವ್ರಗೊಂಡಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ಬಹಿರಂಗ ಭಿನ್ನಮತ ಮತ್ತು ಹಿರಿಯ ನಾಯಕರ ರಾಜೀನಾಮೆ ಪರ್ವ ನಡೆಯುತ್ತಲೇ ಇದೆ. ಟಿಎಂಸಿ ಪಕ್ಷದ ಆಂತರಿಕ ಬೇಗುದಿ ಬಹಿರಂಗಗೊಂಡು ಹಲವು ಹಿರಿಯ ನಾಯಕರ ರಾಜೀನಾಮೆ, ವಿಧಾನಸಭೆಯಲ್ಲಿ ಬಂಡಾಯ ಬಣದ ನಾಯಕ ರಿತಬ್ರತ ಬ್ಯಾನರ್ಜಿ ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಿದ್ದೂ ಸೇರಿದಂತೆ ಇವೇ ಮುಂತಾದ ಬೆಳವಣಿಗೆಗಳ ನಡುವೆ ಟಿಎಂಸಿ ಸಂಸದರು ಈ ನಿಲುವು ತಳೆದಿದ್ದಾರೆ.

Leave a Comment

Your email address will not be published. Required fields are marked *