ರಾಜ್ಯಸಭಾ ಚುನಾವಣೆ| ಬಿಜೆಪಿಯಿಂದ ದೇವೇಗೌಡ್ರಿಗೆ ಟಿಕೆಟ್ ಡೌಟ್

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಕಳುಹಿಸಬೇಕೆಂಬ ಜೆಡಿಎಸ್ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ಈ ಪ್ರಸ್ತಾಪಕ್ಕೆ ಬಿಜೆಪಿ ಹೈಕಮಾಂಡ್‌ ಇನ್ನೂ ಸಮ್ಮತಿ ನೀಡಿಲ್ಲ. ಹೀಗಾಗಿ ದೇವೇಗೌಡರ ಬದಲು ಅಚ್ಚರಿಯ ಅಭ್ಯರ್ಥಿ ರಾಜ್ಯಸಭೆ ಪ್ರವೇಶಿಸುವುದು ದೃಢಪಟ್ಟಿದೆ.

Ad Widget ... .. Ad Widget .

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆ ಇನ್ನೆರಡು ದಿನದಲ್ಲಿ ದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಚರ್ಚೆ ನಡೆಯಲಿದೆ. ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್‌.ಯಡಿಯೂರಪ್ಪ ಈ ಸಭೆಗೆ ಗೈರಾಗಲಿದ್ದಾರೆ. ಕೋರ್ ಕಮಿಟಿ ಕಳುಹಿಸಿದ ಪಟ್ಟಿಯ ಆಧಾರದ ಮೇಲೆ ವರಿಷ್ಠರು ಚರ್ಚೆ ನಡೆಸಿ ಬುಧವಾರ ಅಥವಾ ಗುರುವಾರ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.

Ad Widget

ಬಿಜೆಪಿ ಹಾಗೂ ಜೆಡಿಎಸ್‌ ಮೂಲಗಳ ಪ್ರಕಾರ, ದೇವೇಗೌಡರ ಮರು ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ದೆಹಲಿಯಿಂದ ಇದುವರೆಗೆ ಯಾವುದೇ ಸಂದೇಶ ರವಾನೆಯಾಗಿಲ್ಲ. ಒಂದು ಹಂತದಲ್ಲಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಈ ಬೇಡಿಕೆಯಿಂದ ಹಿಂದೆ ಸರಿಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚುವರಿ ಮತವನ್ನು ಜೆಡಿಎಸ್‌ಗೆ ನೀಡುವ ವಿಚಾರದಲ್ಲೂ ಬಿಜೆಪಿ ನಾಯಕರು ಇನ್ನೂ ತುಟಿ ಬಿಚ್ಚಿಲ್ಲ. ಹೀಗಾಗಿ ರಾಜ್ಯಸಭೆ ಹಾಗೂ ಪರಿಷತ್ ಚುನಾವಣೆ ಮೈತ್ರಿ ಬಾಂಧವ್ಯವನ್ನು ತುಸು ಸಡಿಲಗೊಳಿಸಿದರೂ ಅಚ್ಚರಿ ಇಲ್ಲ.

ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ
ಬಿಜೆಪಿಯಿಂದ ಯಾರು ರಾಜ್ಯಸಭೆ ಪ್ರವೇಶಿಸಬಹುದೆಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಷ್‌, ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ , ನಿರ್ಮಲ್‌ ಕುಮಾರ್ ಸುರಾನಾ ಸೇರಿದಂತೆ ಹಲವರ ಹೆಸರನ್ನು ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಿ ಕಳುಹಿಸಲಾಗಿದೆ. ಇದನ್ನು ಹೊರತುಪಡಿಸಿ ಹೈಕಮಾಂಡ್‌ ಅಚ್ಚರಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಾಧ್ಯತೆಯೂ ಹೆಚ್ಚಿದೆ.

Leave a Comment

Your email address will not be published. Required fields are marked *