ರಾಜ್ಯಾದ್ಯಂತ ಪೂರ್ವ ಮುಂಗಾರು ಅಬ್ಬರ| ಹಲವು ಜಿಲ್ಲೆಗಳಿಗೆ ‌ಬಿರುಗಾಳಿ, ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಮುಂದಿನ ಒಂದು ವಾರವೂ ಹಲವೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಗಂಟೆಗೆ 30ರಿಂದ 60 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

Ad Widget ... ..

ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ 6 ಸೆಂ.ಮೀ ಮಳೆ ದಾಖಲಾಗಿದ್ದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲೂ 6 ಸೆಂ.ಮೀ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಹಾಗೂ ತುಮಕೂರಿನ ವೈ.ಎನ್ ಹೊಸಕೋಟೆಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಮಂಡ್ಯದ ಮದ್ದೂರು, ಧಾರವಾಡ, ಗದಗ, ಶಿವಮೊಗ್ಗ, ಉಡುಪಿ ಸೇರಿದಂತೆ ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

Ad Widget

ಮೇ 19 ಮತ್ತು 20 ರಂದು ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಗಂಟೆಗೆ 50ರಿಂದ 60 ಕಿಮೀ ವೇಗದ ಗಾಳಿ ಬೀಸುವ ಮುನ್ಸೂಚನೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ರಾಮನಗರ, ಚಾಮರಾಜನಗರ ಮತ್ತು ದಾವಣಗೆರೆಯಲ್ಲೂ ಮಳೆ ಮುಂದುವರಿಯಲಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 19 ರಿಂದ ಮೇ 25 ರವರೆಗೆ ಹಲವು ಕಡೆ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಸಮುದ್ರ ತೀರ ಪ್ರದೇಶಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

ಮೇ 26ರಂದು ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ:
ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ಪಶ್ಚಿಮ ಮುಂಗಾರು ಮೇ 26ರ ವೇಳೆಗೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ. ಅದರ ಪರಿಣಾಮವಾಗಿ ಕರ್ನಾಟಕದಲ್ಲೂ ಮಳೆ ಚಟುವಟಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾತಾವರಣದ ಬದಲಾವಣೆಗಳಿಂದ ರಾಜ್ಯದ ಹಲವೆಡೆ ಗುಡುಗು-ಮಿಂಚಿನ ಮಳೆಯ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Comment

Your email address will not be published. Required fields are marked *