ಸಮಗ್ರ ನ್ಯೂಸ್: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ನಟ, ರಾಜಕಾರಣಿ ಸಿಎಂ ಜೋಸೆಫ್ ವಿಜಯ್ ಸೋಮವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದ ರಾಜ್ಯದ ಹೆಮ್ಮೆಯ ಅಮ್ಮ ಕ್ಯಾಂಟೀನ್‌ಗಳ ಮೂಲ ಸೌಕರ್ಯವನ್ನು ನವೀಕರಿಸಲು ಮತ್ತು ಅಲ್ಲಿ ವಿತರಿಸಲಾಗುವ ಆಹಾರದ ಗುಣಮಟ್ಟವನ್ನು ಸುಧಾರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚೆನ್ನೈನ ಸಚಿವಾಲಯದಲ್ಲಿ ನಡೆದ ಹೈ-ಪ್ರೊಫೈಲ್ ಸಭೆಯಲ್ಲಿ ಕ್ಯಾಂಟೀನ್‌ಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದ ಮುಖ್ಯಮಂತ್ರಿ, ಜನಸಾಮಾನ್ಯರಿಗೆ ಸಿಗುವ ಅತ್ಯಂತ ಕಡಿಮೆ ಬೆಲೆಯ ಆಹಾರವು ರುಚಿಕರ ಹಾಗೂ ಅತ್ಯಂತ ಶುದ್ಧವಾಗಿರಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಕೆಲವು ಸಮಯದಿಂದ ತಮಿಳುನಾಡಿನಾದ್ಯಂತ ಇರುವ ಅಮ್ಮ ಕ್ಯಾಂಟೀನ್‌ಗಳಲ್ಲಿ ಸಿಗುವ ಆಹಾರದ ರುಚಿ ಮತ್ತು ಗುಣಮಟ್ಟ ತೃಪ್ತಿದಾಯಕವಾಗಿಲ್ಲ ಎಂಬ ವ್ಯಾಪಕ ದೂರುಗಳು ಹಾಗೂ ಸಾರ್ವಜನಿಕರಿಂದ ನೆಗೆಟಿವ್ ಫೀಡ್‌ಬ್ಯಾಕ್ ಕೇಳಿಬಂದಿದ್ದವು. ಬಡವರು, ಕೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಅವಲಂಬಿಸಿರುವ ಈ ಯೋಜನೆಯು ಹಳ್ಳ ಹಿಡಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ವಿಜಯ್, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.
ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಸೌಕರ್ಯಗಳು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆಯನ್ನು ತಕ್ಷಣವೇ ಸುಧಾರಿಸಬೇಕು. ಅಡುಗೆ ಮಾಡಲು ಆಧುನಿಕ ಸಲಕರಣೆಗಳು ಹಾಗೂ ಹೊಸ ಪಾತ್ರೆಗಳನ್ನು ಖರೀದಿಸಬೇಕು. ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕಳಪೆ ಆಹಾರ ಸಿಗಬಾರದು, ಅತ್ಯಂತ ರುಚಿಕರ ಹಾಗೂ ಗುಣಮಟ್ಟದ ಊಟವನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.







