ರಾಜ್ಯದಲ್ಲಿ ಅಬ್ಬರಿಸಿದ ‌ಬೇಸಿಗೆ ಮಳೆ| ಸಿಡಲಬ್ಬರಕ್ಕೆ ಮೂವರು ಬಲಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಬೇಸಿಗೆ ಮಳೆಯ ಆರ್ಭಟ ತೀವ್ರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 13 ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಹಾಗೂ ಮಳೆಗೆ ಸಂಬಂಧಿಸಿದ ಅವಘಡಗಳಿಂದ ಮೂವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

Ad Widget ... ..

ಗದಗ, ಲಕ್ಷ್ಮೇಶ್ವರ ಹಾಗೂ ಹೊನ್ನಾಳಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗದಗ ಹೊರವಲಯದ ಒಕ್ಕಲಗೇರಿ ಓಣಿಯ ನಿವಾಸಿ, ಕುರಿಗಾಹಿ ಮರೇತಮ್ಮಪ್ಪ (52) ಎಂಬುವವರು ಮನೆಯ ಹೊರಗೆ ಮಲಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Ad Widget

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗಾಳಿ-ಮಳೆಗೆ ಹೆದ್ದಾರಿಯ ವಿದ್ಯುತ್ ಕಂಬವೊಂದು ಮುರಿದು ಬಿದ್ದ ಪರಿಣಾಮ, ಕುರಿಗಾಯಿ ಮಂಜಪ್ಪ (26) ಎಂಬ ಯುವಕ ಮೃತಪಟ್ಟಿದ್ದಾನೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಲೆಕಣಬೂರು ಗ್ರಾಮದ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ನಾಗರಾಜಪ್ಪ (45) ಎಂಬುವವರು ಮನೆಯ ಮುಂದೆ ನಿಂತು ಮಳೆ ವೀಕ್ಷಿಸುತ್ತಿದ್ದಾಗ, ಸಿಡಿಲಿನ ಭೀಕರ ಶಬ್ದಕ್ಕೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.

ಸೋಮವಾರ ಮಧ್ಯಾಹ್ನದ ನಂತರ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟಿಸಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡು ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ತಗ್ಗು ಪ್ರದೇಶಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ಸುಮಾರು 1 ಅಡಿಯಷ್ಟು ನೀರು ನಿಂತಿದ್ದರಿಂದ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದರು.

ಚಾಮರಾಜನಗರ, ಶಿವಮೊಗ್ಗ, ಬಾಗಲಕೋಟೆ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾದ ವರದಿಯಾಗಿದೆ. ಮುಂಗಾರು ಪೂರ್ವ ಮಳೆಯ ಈ ಆರ್ಭಟದಿಂದಾಗಿ ರೈತರು ಮತ್ತು ಸಾರ್ವಜನಿಕರು ಆತಂಕಗೊಂಡಿದ್ದು, ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

Leave a Comment

Your email address will not be published. Required fields are marked *