ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ದೇವರ ದರ್ಶನದ ಸಮಯದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದ್ದು, ಭಕ್ತರಿಗೆ ಹೆಚ್ಚಿನ ಸಮಯದ ದರ್ಶನ ಸೌಲಭ್ಯ ಕಲ್ಪಿಸಲಾಗಿದೆ.
ಈ ಮೊದಲು ಮಧ್ಯಾಹ್ನ 1.30ರಿಂದ 3.30ರವರೆಗೆ ದರ್ಶನ ಸ್ಥಗಿತಗೊಳ್ಳುತ್ತಿತ್ತು. ಆಡಳಿತ ಮಂಡಳಿಯ ಹೊಸ ನಿರ್ಣಯದಂತೆ ಮಧ್ಯಾಹ್ನ 2ರಿಂದ 3ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಹೊಸ ವ್ಯವಸ್ಥೆಯಂತೆ ಬೆಳಿಗ್ಗೆ 6.30ರಿಂದ ಮಧ್ಯಾಹ್ನ 2ರ ವರೆಗೆ, ಮಧ್ಯಾಹ್ನ 3ರಿಂದ ರಾತ್ರಿ 8.30ರವರೆಗೆ ನಿರಂತರ ದರ್ಶನ ವ್ಯವಸ್ಥೆ ಇರಲಿದೆ. ಮಹಾಮಂಗಳಾರತಿಯ ಸಮಯದಲ್ಲಿ ಮಾತ್ರ ಹಿಂದಿನಂತೆ ಅಲ್ಪಕಾಲ ದರ್ಶನ ಸ್ಥಗಿತಗೊಳ್ಳಲಿದೆ. ಈ ಪರಿಷ್ಕೃತ ದರ್ಶನ ವ್ಯವಸ್ಥೆ ಮೇ 10ರಿಂದಲೇ ಜಾರಿಗೆ ಬಂದಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.







