ಸಮಗ್ರ ನ್ಯೂಸ್: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ
ಮತಪತ್ರಗಳ ಮರು ಎಣಿಕೆಯಲ್ಲಿ ಗೆದ್ದಿರುವ ಬಿಜೆಪಿಯ ಡಿ.ಎನ್. ಜೀವರಾಜ್ ಅವರು ಬುಧವಾರ ಕೊನೆಗೂ ಶಾಸಕರಾಗಿ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸ್ಪೀಕರ್ ಯು.ಟಿ.ಖಾದರ್ ಅವರು ಜೀವರಾಜ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
2023ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆ ವೇಳೆ ಅಂಚೆ ಮತಪತ್ರಗಳ ಎಣಿಕೆಯಲ್ಲಿ ಆಗಿದ್ದ ಎಡವಟ್ಟಿನಿಂದ ಕಾಂಗ್ರೆಸ್ ಪಾಲಾಗಿದ್ದ ಶಾಸಕ ಸ್ಥಾನವನ್ನು ನ್ಯಾಯಾಂಗ ಹೋರಾಟದ ಮೂಲಕ ಜೀವರಾಜ್ ಪಡೆದುಕೊಂಡಿದ್ದರು. ಅಂಚೆ ಮತಪತ್ರಗಳ ಮರುಎಣಿಕೆಯ ಫಲಿತಾಂಶದಿಂದ ಶಾಸಕರಾಗಿ ಗೆದ್ದಿದ್ದ ಜೀವರಾಜ್, ತಮಗೆ ಪ್ರಮಾಣವಚನ ಬೋಧಿಸುವಂತೆ ಮಂಗಳವಾರ ಸ್ಪೀಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಅಷ್ಟೇ ಅಲ್ಲದೆ, ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ, ತಮಗೆ ಪ್ರತಿಜ್ಞಾವಿಧಿ ಬೋಧಿಸುವಂತೆ ಸ್ಪೀಕರ್ ಖಾದರ್ ಅವರಿಗೆ ನಿರ್ದೇಶನ ನೀಡುವಂತೆಯೂ ಕೋರಿದ್ದರು. ಅದರಂತೆ ರಾಜ್ಯಪಾಲರು ಸ್ಪೀಕರ್ ಅವರಿಗೆ ಮಾಹಿತಿ ನೀಡಿದ್ದರು.







