ಸಮಗ್ರ ನ್ಯೂಸ್: ಅಮಲು ಪದಾರ್ಥ ಸೇವಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಪೊಲೀಸ್ ಉಪ ನಿರೀಕ್ಷಕರಾದ ಬಿ.ಎಸ್. ನಾಯಕ್ ಅವರು ಸಿಬ್ಬಂದಿಗಳೊಂದಿಗೆ ನಾಲ್ಕು ಮಾರ್ಗ ಜಂಕ್ಷನ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸ್ಕೂಟರ್ನಲ್ಲಿ ಬಂದ ಅಸ್ಬೀರ್ ಹೆಲ್ಮೆಟ್ ಧರಿಸಿರಲಿಲ್ಲ. ಪೊಲೀಸರು ಆತನನ್ನು ತಡೆದು ವಿಚಾರಿಸಿದಾಗ, ಆರೋಪಿತನು ಉಪ ನಿರೀಕ್ಷಕರೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆ.
ಆರೋಪಿಯ ವಿಚಿತ್ರ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನು ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ತಕ್ಷಣ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಮಾದಕ ದ್ರವ್ಯ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ (NDPS Act), ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮೋಟಾರು ವಾಹನ ಕಾಯ್ದೆಯಡಿ (IMV Act) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







