ಸಮಗ್ರ ನ್ಯೂಸ್: ದೇಶದ ಪ್ರಮುಖ ಫಿನ್‌ಟೆಕ್ ಸಂಸ್ಥೆಯಾದ ಪೇಟಿಎಂಗೆ ದೊಡ್ಡ ಆಘಾತ ಎದುರಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 24, 2026 ರಿಂದ ಜಾರಿಗೆ ಬರುವಂತೆ ತಕ್ಷಣದಿಂದ ರದ್ದುಗೊಳಿಸಿದೆ.
ಆರ್‌ಬಿಐ ಆದೇಶದಂತೆ ಏಪ್ರಿಲ್ 24ರ ವ್ಯವಹಾರದ ಅಂತ್ಯದ ವೇಳೆಗೆ ಪೇಟಿಎಂ ಬ್ಯಾಂಕ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 22(4) ರ ಅಡಿಯಲ್ಲಿ ನೀಡಲಾಗಿದ್ದ ಪರವಾನಗಿಯನ್ನು ರದ್ದುಪಡಿಸಲಾಗಿದೆ.
ಬ್ಯಾಂಕ್ ನಡೆಸುತ್ತಿರುವ ವ್ಯವಹಾರದ ಶೈಲಿಯು ಠೇವಣಿದಾರರ ಹಿತಾಸಕ್ತಿಗೆ ಮಾರಕವಾಗಿದೆ ಎಂಬ ಗಂಭೀರ ಕಾರಣವನ್ನು ಕೇಂದ್ರ ಬ್ಯಾಂಕ್ ನೀಡಿದೆ.
ಆರ್‌ಬಿಐನ ಈ ಕಠಿಣ ಕ್ರಮದ ನಡುವೆಯೇ, ಪೇಟಿಎಂನ ಮಾತೃ ಸಂಸ್ಥೆಯಾದ ‘ಒನ್ 97 ಕಮ್ಯುನಿಕೇಷನ್ಸ್’ ಷೇರುಗಳು ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡಿವೆ. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಷೇರುಗಳು ಶೇ. 0.5 ರಷ್ಟು ಕುಸಿದು ಪ್ರತಿ ಷೇರಿಗೆ ರೂ. 1,153 ಕ್ಕೆ ಸ್ಥಿರಗೊಂಡಿವೆ.
“ಬ್ಯಾಂಕಿನ ಕಾರ್ಯವೈಖರಿಯು ಗ್ರಾಹಕರ ಹಿತದೃಷ್ಟಿಯಿಂದ ಸುರಕ್ಷಿತವಾಗಿಲ್ಲದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,” ಎಂದು ಆರ್‌ಬಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.







