ಸಮಗ್ರ ನ್ಯೂಸ್: ಇರಾನ್, ಲೆಬನಾನ್‌ನಲ್ಲಿ ಜಾರಿಗೆ ಬಂದ ಯುದ್ಧ ವಿರಾಮದ ಬಳಿಕ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಾರ್ಮುಝ್ ಮಾರ್ಗವನ್ನು ಮತ್ತೆ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ತೆರೆಯಲಾಗಿದೆ ಎಂದು ತಿಳಿಸಿದೆ. ಇದರಿಂದ ಇಂಧನ ಮಾರುಕಟ್ಟೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ದೊಡ್ಡ ಮಟ್ಟದ ಸಮಾಧಾನ ತಂದಿದೆ.
ಈಗ ಲೆಬನಾನ್ ಪ್ರದೇಶದಲ್ಲಿ ಪರಿಸ್ಥಿತಿ ಶಾಂತವಾಗುತ್ತಿರುವ ಹಿನ್ನೆಲೆ, ಹಡಗುಗಳ ಸಂಚಾರ ಸುಗಮವಾಗಿಸಲು ಇರಾನ್ ಈ ಕ್ರಮ ಕೈಗೊಂಡಿದೆ. ಈ ನಿರ್ಧಾರದಿಂದ ಜಾಗತಿಕ ತೈಲ ಸರಬರಾಜು ಮತ್ತು ಸಾಗಣೆ ವ್ಯವಸ್ಥೆಯಲ್ಲಿ ಸುಧಾರಣೆ ಕಾಣುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಅವರು, ಹಿಜ್ಬುಲ್ಲಾ ಕದನ ವಿರಾಮದ ಉಳಿದ ಅವಧಿಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ನೌಕೆಗಳ ಸಂಚಾರವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. ವಿಶ್ವದ ಅತ್ಯಂತ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ ಇಲ್ಲಿ ವಿಧಿಸಲಾಗಿದ್ದ ಕಡಲ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಸರಕು ಸಾಗಣೆ ಮತ್ತು ವಾಣಿಜ್ಯ ಹಡಗುಗಳಿಗೆ ಯಾವುದೇ ಅಡೆತಡೆ ಇರುವುದಿಲ್ಲ ಎಂದು ಇರಾನ್ ಭರವಸೆ ನೀಡಿದೆ. ಈ ನಿರ್ಧಾರವು ಲೆಬನಾನ್‌ನಲ್ಲಿ ನಡೆಯುತ್ತಿರುವ ಕದನ ವಿರಾಮ ಪ್ರಕ್ರಿಯೆಯ ಭಾಗವಾಗಿದೆ ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ವಿಶ್ವದ ತೈಲ ಪೂರೈಕೆಯ ಬಹುಪಾಲು ಭಾಗ ಈ ಜಲಮಾರ್ಗದ ಮೂಲಕವೇ ಸಾಗುತ್ತದೆ. ಹಾಗಾಗಿ, ಇರಾನ್‌ನ ಈ ಘೋಷಣೆಯು ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ದೊಡ್ಡ ಮಟ್ಟದ ಸಮಾಧಾನ ತಂದಿದೆ.
ಇರಾನ್ ವಿದೇಶಾಂಗ ಸಚಿವ ಅರಾಗ್ಚಿ ಅವರು ತಮ್ಮ ಹಿಂದಿನ ಟ್ವಿಟರ್‌ನಲ್ಲಿ, “ಲೆಬನಾನ್‌ನಲ್ಲಿನ ಕದನ ವಿರಾಮಕ್ಕೆ ಅನುಗುಣವಾಗಿ, ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರವನ್ನು ಕದನ ವಿರಾಮದ ಉಳಿದ ಅವಧಿಗೆ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ,” ಎಂದು ಬರೆದುಕೊಂಡಿದ್ದಾರೆ.
ಹಡಗುಗಳು ಮನಬಂದಂತೆ ಸಂಚರಿಸುವಂತಿಲ್ಲ, ಇರಾನ್‌ನ ಕಡಲ ಸಂಸ್ಥೆ ನಿಗದಿಪಡಿಸಿದ ನಿರ್ದಿಷ್ಟ ಮಾರ್ಗದಲ್ಲೇ ಚಲಿಸಬೇಕಾಗುತ್ತದೆ. ಈ ಸಡಿಲಿಕೆಯು ಲೆಬನಾನ್ ಕದನ ವಿರಾಮ ಜಾರಿಯಲ್ಲಿರುವ ಅವಧಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಹಡಗುಗಳಿಗೆ ಸುರಕ್ಷಿತ ಹಾದಿ ಒದಗಿಸುವ ಮೂಲಕ ಜಾಗತಿಕ ವ್ಯಾಪಾರಕ್ಕೆ ಇರಾನ್ ಸಹಕಾರ ನೀಡುವ ಸೂಚನೆ ನೀಡಿದೆ. ಈ ನಿರ್ಧಾರವು ಕಳೆದ ಕೆಲವು ತಿಂಗಳುಗಳಿಂದ ಜಾಗತಿಕ ಮಟ್ಟದಲ್ಲಿ ತಲೆದೂರಿದ್ದ ನೌಕಾ ಸಾರಿಗೆಯ ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಿದೆ.
ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕದನ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಇರಾನ್ ಈ ನಿರ್ಧಾರವನ್ನು ಪ್ರಕಟಿಸಿದೆ.
ಕುತೂಹಲಕಾರಿ ವಿಷಯವೆಂದರೆ, ಟ್ರಂಪ್ ಅವರ ಅಧಿಕೃತ ಹೇಳಿಕೆಯಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪು ಹೆಜ್ಬೊಲ್ಲಾ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಕಳೆದ ಕೆಲವು ವಾರಗಳಿಂದ ಇಸ್ರೇಲ್ ಮೇಲೆ ನಿರಂತರ ದಾಳಿ ನಡೆಸುತ್ತಿರುವುದು ಇದೇ ಗುಂಪು ಎಂಬುದು ಇಲ್ಲಿ ಗಮನಾರ್ಹವಾಗಿದೆ.







