ಸಮಗ್ರ ನ್ಯೂಸ್: ʼನೋಡಲು ತನ್ನಂತಿಲ್ಲʼ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪುತ್ರನನ್ನೇ ಕೊಲೆ ಮಾಡಿದ ವಿಲಕ್ಷಣ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಕಳೆದ ಮಾ. 15ರಂದು ಈ ಘಟನೆ ನಡೆದಿದೆ. ಈ ಮೊದಲು ಮಗು ಕಾಣೆಯಾಗಿದೆ ಎಂದು ದೂರು ಕೊಟ್ಟಿದ್ದ ಕುಟುಂಬಸ್ಥರೇ ಇದೀಗ ತಂದೆಯೇ ಪುತ್ರನನ್ನು ಕೊಂದಿದ್ದಾನೆಂದು ದೂರು ದಾಖಲಿಸಿದ್ದು, ಇಡೀ ಪ್ರಕರಣ ರೋಚಕ ತಿರುವು ಪಡೆದಿದೆ.
ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತ ಮಾ. 15ರಂದು ತನ್ನ ಆರು ವರ್ಷದ ಪುತ್ರ ಸಿದ್ಧಾರ್ಥನನ್ನು ಶಾಲೆಗೆ ಸೇರಿಸುವುದಾಗಿ ಮನೆಯಿಂದ ಕರೆದೊಯ್ದಿದ್ದಾನೆ. ಬಳಿಕ ಮನೆಗೆ ಬಂದು ಮಗನನ್ನು ಶಾಲೆಗೆ ಸೇರಿಸಿದ್ದಾಗಿ ತಿಳಿಸಿದ್ದಾನೆ. ಎ.1ರಂದು ಸಿದ್ಧಾರ್ಥನ ಜನ್ಮ ದಿನವಿದ್ದು, ಆಚರಣೆಗಾಗಿ ಕರೆತರಲು ಮಲ್ಲಿಕಾರ್ಜುನನ ಪತ್ನಿ ಭಾಗ್ಯಶ್ರೀ ದುಂಬಾಲು ಬಿದ್ದಿದ್ದಾಳೆ. ಕಡೇ ಪಕ್ಷ ಫೋನ್ ಮಾಡಿಯಾದರೂ ಮಗನೊಂದಿಗೆ ಮಾತನಾಡಿಸು ಎಂದು ಒತ್ತಾಯಿಸಿದ ಬಳಿಕ, ಯಾರ ಜೊತೆಗೋ ಮಾತನಾಡಿಸಿದ್ದು, ಮಗನ ಕೈಗೆ ಮೊಬೈಲ್ ಕೊಡುವಂತೆ ಹೇಳಿದಾಗ ಆತ ಮಾತನಾಡಲು ನಿರಾಕರಿಸುತ್ತಿರುವುದಾಗಿ ಅಪರಿಚಿತರು ತಿಳಿಸಿದ್ದಾರೆ.
ಇದರಿಂದ ಅನುಮಾನಗೊಂಡ ಭಾಗ್ಯಶ್ರೀ ಮಗನನ್ನು ಕರೆದುಕೊಂಡು ಬರೋಣವೆಂದು ಒತ್ತಾಯಿಸಿದ್ದು, ಮಲ್ಲಿಕಾರ್ಜುನ ಬೈಕ್ ಮೇಲೆ ಕರೆದೊಯ್ದು ಸಿಂದಗಿ ಬಸ್ ನಿಲ್ದಾಣ ಮತ್ತಿತರ ಕಡೆ ಸುತ್ತಾಡಿಸಿ ಬಂದಾಳ ಗ್ರಾಮದಲ್ಲಿ ಸಂಬಂಧಿಕರನ್ನು ಭೇಟಿ ಮಾಡಿಸಿದ್ದಾನೆ. ವಾಪಸ್ ನಾಗಠಾಣಕ್ಕೆ ಬರುತ್ತಿರಬೇಕಾದರೆ ಮಾರ್ಗಮಧ್ಯೆ ಭಾಗ್ಯಶ್ರೀ ಹಠ ಹಿಡಿದಿದ್ದಾರೆ.
ಆದರೆ ಮಲ್ಲಿಕಾರ್ಜುನ ನನ್ನನ್ನು ಕ್ಷಮಿಸು ಎಂದಷ್ಟೇ ಹೇಳಿದ್ದಾನೆ. ಬಳಿಕ ಗ್ರಾಮದಲ್ಲಿ ಕುಟುಂಬಸ್ಥರು ಹಾಗೂ ಹಿರಿಯರು ಸತ್ಯ ಬಾಯಿ ಬಿಡುವಂತೆ ಒತ್ತಾಯಿಸತೊಡಗಿದ್ದಾಗ ಮಲ್ಲಿಕಾರ್ಜುನ ಪರಾರಿಯಾಗಿದ್ದಾನೆ. ಅನಂತರ ಪೊಲೀಸರು ಕರೆತಂದು ವಿಚಾರಣೆ ನಡೆಸಲಾಗಿ ಸತ್ಯ ಬಯಲಾಗಿದೆ.
ಮಾ. 16ರಂದು ಮಹಾರಾಷ್ಟ್ರದ ಕರಾಡ ಬಳಿಯ ಕೃಷ್ಣಾ ನದಿಯಲ್ಲಿ ಪುತ್ರನನ್ನು ಕೊಂದು ಎಸೆದಿರುವ ಮಲ್ಲಿಕಾರ್ಜುನ ಬಳಿಕ ಸತ್ಯ ಮರೆಮಾಚಲು ಹಲವು ಕಸರತ್ತು ನಡೆಸಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಕರಾಡದಲ್ಲಿ ಬಾಲಕನೋರ್ವನ ಮೃತದೇಹ ಪತ್ತೆಯಾಗಿದ್ದು, ಮೃತದೇಹ ಪರಿಶೀಲಿಸಲಾಗಿ ಸಿದ್ಧಾರ್ಥನದ್ದೇ ಎಂದು ಗೊತ್ತಾಗಿದೆ.







