ಯೋಗೇಶ್ ಗೌಡ ಕೊಲೆ ಪ್ರಕರಣ| ಮಾಜಿ ಸಚಿವ ವಿನಯ್ ಕುಲಕರ್ಣಿ ದೋಷಿ| ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ 21 ಆರೋಪಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಸತತ 10 ವರ್ಷಗಳ ನಂತರ ವಿಚಾರಣೆ ಬಳಿಕ ಕೊನೆಗೂ ಈ ಪ್ರಕರಣದಲ್ಲಿ ಶಿಕ್ಷೆಯಾಗಿ ನ್ಯಾಯಾಂಗ ಅಂತಿಮ ಮುದ್ರೆ ಬಿದ್ದಿದೆ.

Ad Widget ... ..

ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಅಪರಾಧಿಯಾಗಿದ್ದಾರೆ. ನ್ಯಾ. ಸಂತೋಷ್ ಗಜಾನನ ಭಟ್ ಅವರಿಂದ ಈ ತೀರ್ಪು ಪ್ರಕಟವಾಗಿದ್ದು, ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ.

Ad Widget

ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾಯಾಲಯವು ಏಪ್ರಿಲ್ 9ರಂದು ತೀರ್ಪು ಪ್ರಕಟಿಸುವುದಾಗಿ ಮೊದಲು ತಿಳಿಸಿತ್ತು. ಆದರೆ ತಾಂತ್ರಿಕ ಕಾರಣಗಳು ಹಾಗೂ ತೀರ್ಪು ರಚನೆ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅದನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಇದೀಗ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಕೊಲೆ ಆರೋಪಿಗಳ ಜೊತೆ ವಿನಯ್‌ಕುಲಕರ್ಣಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತು. ಒಟ್ಟು 3 ಚಾರ್ಜ್‌ಶೀಟ್‌ಗಳು ಸಲ್ಲಿಕೆಯಾಗಿದ್ದು, 113 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. 40 ಜನ ಸಾಕ್ಷಿಗಳ ವಿಡಿಯೋ ಹೇಳಿಕೆ ದಾಖಲಿಸಲಾಗಿದೆ. ಪ್ರಕರಣದ ತೀರ್ಪು ಹಿನ್ನೆಲೆಯಲ್ಲಿ ಕುಟುಂಬಸ್ಥರ ಜೊತೆ ನ್ಯಾಯಾಲಯಕ್ಕೆ ಕುಲಕರ್ಣಿ ಆಗಮಿಸಿದ್ದರು. ಧಾರವಾಡದಿಂದ ಬೆಂಬಲಿಗರು ಕೂಡ ಆಗಮಿಸಿದ್ದರು.

A1 – ಬಸವರಾಜ್‌ ಮುತ್ತಗಿ, A2 – ವಿಕ್ರಂ ಬಳ್ಳಾರಿ, A3 – ಕೀರ್ತಿ ಕುಮಾರ್​, A4 – ಸಂದೀಪ್​, A5 – ವಿನಾಯಕ್, ​​A6 – ಮಹಾಬಲೇಶ್ವರ, A7 – ಸಂತೋಷ್, A8 – ದಿನೇಶ್​​, A9 – ಅಶ್ವಥ್​​, A10 – ಸುನೀಲ್​​ ಕೆ.ಎಸ್​, A11 – ನಜರ್ ಅಹಮದ್​, A12 – ಶಹನವಾಜ್​​, A13 – ನೂತನ್, ​​A14 – ಹರ್ಷಿತ್, ​​A15 – ವಿನಯ್ ಕುಲಕರ್ಣಿ, A16 – ಚಂದ್ರಶೇಖರ್​ ಇಂಡಿ , A17 – ಶಿವಾನಂದ್​​ ಶ್ರೀಶೈಲ ಬಿರಾದರ್, ​A18 – ವಿಕಾಸ್​​ ಕಲಬುರ್ಗಿ, A19 – ಚೆನ್ನಕೇಶವ ಟಿಂಗರಿಕರ್, ​A20 – ವಾಸುದೇವ್​​ ನಿಲೇಕಣಿ , A21 – ಸೋಮಶೇಖರ್​ ಬಸಪ್ಪ ನ್ಯಾಮಗೌಡ

2016ರ ಜೂನ್ 15ರಂದು ಧಾರವಾಡದಲ್ಲಿ ನಡೆದಿದ್ದ ಈ ಭೀಕರ ಘಟನೆಯಲ್ಲಿ, ಯೋಗೇಶ್ ಗೌಡ ಅವರನ್ನು ಮುಂಜಾನೆ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರಂಭಿಕ ತನಿಖೆಯಲ್ಲಿ ಆಸ್ತಿ ವಿವಾದವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿತ್ತು.

ಮೊದಲ ಹಂತದಲ್ಲಿ ಆರು ಮಂದಿಯ ವಿರುದ್ಧ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಮತ್ತು ರಾಜಕೀಯ ಅಂಶಗಳ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದಂತೆ, ಯೋಗೇಶ್ ಗೌಡ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣವನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (CBI)ಗೆ ಹಸ್ತಾಂತರಿಸಲಾಯಿತು.

ಯೋಗೇಶ್ ಗೌಡ ಕೊಲೆ ಪ್ರಕರಣ ಹಿನ್ನೆಲೆ ಕೋರ್ಟ್ ತೀರ್ಪಿಗೂ ಮುನ್ನ ಸದಾಶಿವನಗರ ನಿವಾಸದಲ್ಲಿ ಶಾಸಕ ವಿನಯ್ ಕುಲಕರ್ಣಿ ಹೇಳಿಕೆ ನೀಡಿ, ಇವತ್ತು ತೀರ್ಪು ಕೊಡ್ತೀನಿ ಅಂತ ಹೇಳಿದ್ರು. ನ್ಯಾಯಾಂಗ ವ್ಯವಸ್ಥೆ ಮೇಲೆ‌ ವಿಶ್ವಾಸ ಇದೆ. ತೀರ್ಪು ಬಂದ ಬಳಿಕ ಮಾತನಾಡುತ್ತೇನೆ. ಈ ಸಂದರ್ಭದಲ್ಲಿ ಚಾರ್ಜ್ ಶೀಟ್ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ ಎಂದರು.

ಸುಮಾರು 10 ವರ್ಷಗಳ ಬಳಿಕ ಈ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿರುವುದು ಯೋಗೇಶ್ ಗೌಡ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ. ರಾಜಕೀಯ, ಆಸ್ತಿ ವಿವಾದ ಮತ್ತು ವೈಯಕ್ತಿಕ ವೈಮನಸ್ಸು ಎಲ್ಲಾ ಸೇರಿ ನಡೆದ ಈ ಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ನ್ಯಾಯಾಲಯದ ತೀರ್ಪು ಈ ಪ್ರಕರಣಕ್ಕೆ ಒಂದು ಮಹತ್ವದ ತಿರುವು ನೀಡಿದೆ.

Leave a Comment

Your email address will not be published. Required fields are marked *