ದ್ವಿತೀಯ ಪಿಯುಸಿ ದಾಖಲೆಯ ಫಲಿತಾಂಶ| ಉಡುಪಿ ಪ್ರಥಮ, ದ.ಕ ದ್ವಿತೀಯ ಸ್ಥಾನ| ಆಳ್ವಾಸ್ ನ ದಿಶಾ, ಬೆಂಗಳೂರಿನ ಅದಿತಿ‌ ರಾಜ್ಯಕ್ಕೆ ಟಾಪರ್ಸ್

ಸಮಗ್ರ ನ್ಯೂಸ್: ಗುರುವಾರ ಪ್ರಕಟಗೊಂಡ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.96.39 ಉತ್ತೀರ್ಣದ ಫಲಿತಾಂಶದೊಂದಿಗೆ ರಾಜ್ಯದಲ್ಲೇ ಸತತ ಎರಡನೇ ವರ್ಷವೂ ಅಗ್ರಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಸತತ ಎರಡನೇ ವರ್ಷ ನೆರೆಯ ದಕ್ಷಿಣ ಕನ್ನಡ ಜಿಲ್ಲೆ ನಿಕಟ ಸ್ಪರ್ಧೆ ನೀಡಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.

Ad Widget ... ..

ಈ ಬಾರಿ ಉಡುಪಿ ಶೇ.96.39 ಫಲಿತಾಂಶದೊಂದಿಗೆ ಅಗ್ರಸ್ಥಾನಿಯಾದರೆ ದಕ್ಷಿಣ ಕನ್ನಡ ಜಿಲ್ಲೆ ಶೇ.96.35 ಉತ್ತೀರ್ಣತೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. 2025ರಲ್ಲಿ ಉಡುಪಿ ಜಿಲ್ಲೆ ಶೇ.93.90 ಫಲಿತಾಂಶದೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಶೇ.0.33ರಷ್ಟು ಹಿನ್ನಡೆಯೊಂದಿಗೆ ದಕ್ಷಿಣ ಕನ್ನಡ (ಶೇ.93.57) ಮೂರು ವರ್ಷಗಳ ಬಳಿಕ ದ್ವಿತೀಯ ಸ್ಥಾನಕ್ಕೆ ಇಳಿದಿತ್ತು.

Ad Widget

ಇದಕ್ಕೆ ಮುನ್ನ ಕೊರೋನಾದ ಬಳಿಕ ಮೂರು ವರ್ಷಗಳಲ್ಲಿ- 2022, 2023, 2024- ಸತತವಾಗಿ ದಕ್ಷಿಣ ಕನ್ನಡ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ ಅಗ್ರಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದರೆ, ತೀವ್ರ ಸ್ಪರ್ಧೆಯ ಹೊರತಾಗಿಯೂ ಉಡುಪಿ ಜಿಲ್ಲೆಯ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡುವಂತಾಗಿತ್ತು.

2024ರಲ್ಲಿ ದಕ್ಷಿಣಕನ್ನಡ ಜಿಲ್ಲೆ ಶೇ.97.37ರ ಸಾಧನೆಯೊಂದಿಗೆ ಅಗ್ರಸ್ಥಾನಿ ಯಾದರೆ, ಉಡುಪಿ ಕೇವಲ ಶೇ.0.57ರ ಹಿನ್ನಡೆಯೊಂದಿಗೆ (ಶೇ.96.80) ಎರಡನೇ ಸ್ಥಾನ ಪಡೆದಿತ್ತು. 2023ರಲ್ಲಿ ದಕ್ಷಿಣ ಕನ್ನಡ ಶೇ.95.33 ರೊಂದಿಗೆ, ಉಡುಪಿ ಜಿಲ್ಲೆ ಶೇ.95.24 ಸಾಧನೆಯೊಂದಿಗೆ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದವು. 2022ರಲ್ಲಿ ದಕ್ಷಿಣಕನ್ನಡ ಶೇ.88.02 ಫಲಿತಾಂಶ ಪಡೆದಿದ್ದರೆ, ಉಡುಪಿ ಜಿಲ್ಲೆ ಶೇ.86.38 ಫಲಿತಾಂಶ ಪಡೆದಿತ್ತು. 2019-20 ರಲ್ಲಿ ಎರಡೂ ಜಿಲ್ಲೆಗಳು ಶೇ.90.71 ಫಲಿತಾಂಶ ಪಡೆದು ಸಮಬಲದಲ್ಲಿದ್ದರೆ, 2018-19ರಲ್ಲಿ ಉಡುಪಿ ಜಿಲ್ಲೆ ಶೇ.92.20 ಫಲಿತಾಂಶದೊಂದಿಗೆ ರಾಜ್ಯಕ್ಕೆ ಅಗ್ರಸ್ಥಾನಿಯಾಗಿತ್ತು.

ಈ ಬಾರಿ ಮೊದಲ ಸಲ ಪರೀಕ್ಷೆ ಬರೆದ ಜಿಲ್ಲೆಯ ಒಟ್ಟು 16,624 ವಿದ್ಯಾರ್ಥಿಗಳಲ್ಲಿ 16,024 ಮಂದಿ ತೇರ್ಗಡೆ ಗೊಂಡಿದ್ದು ಶೇ.96.39 ಫಲಿತಾಂಶ ದಾಖಲಾಗಿದೆ. ಖಾಸಗಿಯಾಗಿ, ಮರು ಪರೀಕ್ಷೆ ಬರೆದವರು ಸೇರಿದಂತೆ ಒಟ್ಟಾರೆಯಾಗಿ ಈ ಬಾರಿ 17,133 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 16,275 ಮಂದಿ ತೇರ್ಗಡೆಗೊಂಡು ಶೇ.94.99 ಫಲಿತಾಂಶ ದಾಖಲಾಗಿದೆ. ಖಾಸಗಿಯಾಗಿ ಪರೀಕ್ಷೆ ಬರೆದವರು ಶೇ.52.43ರಷ್ಟು ಹಾಗೂ ಮರು ಪರೀಕ್ಷೆ ಬರೆದವರು ಶೇ.41.01ರಷ್ಟು ತೇರ್ಗಡೆಗೊಂಡಿದ್ದಾರೆ.

ಬಾಲಕಿಯರ ಮೇಲುಗೈ: ಜಿಲ್ಲೆಯಲ್ಲಿ 8452 ಮಂದಿ ಬಾಲಕರಲ್ಲಿ 7872 ಮಂದಿ (ಶೇ.93.14) ಹಾಗೂ 8681 ಮಂದಿ ಬಾಲಕಿಯರಲ್ಲಿ 8403 ಮಂದಿ (ಶೇ.96.8) ತೇರ್ಗಡೆಗೊಂಡಿದ್ದಾರೆ. ಈ ಮೂಲಕ ಈ ವರ್ಷವೂ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಪಡೆದಂತಾಗಿದೆ.

ಆಂಗ್ಲ ಮಾಧ್ಯಮದವರ ಸಾಧನೆ: ಆಂಗ್ಲ ಮಾಧ್ಯಮದಲ್ಲಿ ಉತ್ತರ ಬರೆದ ವಿದ್ಯಾರ್ಥಿಗಳೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ 15,299 ವಿದ್ಯಾರ್ಥಿಗಳಲ್ಲಿ 14,756 ಮಂದಿ (ಶೇ.96.45) ಹಾಗೂ ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದ 1834 ವಿದ್ಯಾರ್ಥಿಗಳಲ್ಲಿ 1519 ಮಂದಿ (ಶೇ.82.82) ತೇರ್ಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆ ಬರೆದ 1160 ಮಂದಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಲ್ಲಿ 1052 (ಶೇ.90.69) ಮಂದಿ ಹಾಗೂ 762 ಮಂದಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಲ್ಲಿ 705 ಮಂದಿ (92.52) ತೇರ್ಗಡೆ ಗೊಂಡಿದ್ದಾರೆ. ಉಳಿದಂತೆ 2ಎ ವರ್ಗದಲ್ಲಿ ಶೇ.95.33, 2ಬಿಯಲ್ಲಿ ಶೇ.93.39, 3ಎಯಲ್ಲಿ 97.71, 3ಬಿಯಲ್ಲಿ ಶೇ.96.56 ಹಾಗೂ ಇತರ ವರ್ಗದಲ್ಲಿ ಶೇ.96.59ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.

ನಗರ ವಿದ್ಯಾರ್ಥಿಗಳ ಮೇಲುಗೈ: ಜಿಲ್ಲೆಯ ಫಲಿತಾಂಶದಲ್ಲಿ ಈ ಬಾರಿ ನಗರ ಪ್ರದೇಶಗಳ ವಿದ್ಯಾರ್ಥಿಗಳು ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ 6090 ಮಂದಿ ನಗರದ ವಿದ್ಯಾರ್ಥಿಗಳ ಪೈಕಿ 5877 ಮಂದಿ (ಶೇ.96.5) ಉತ್ತೀರ್ಣರಾಗಿದ್ದರೆ, 10,534 ಮಂದಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ 10,147 ಮಂದಿ (ಶೇ.96.33) ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿದ್ಯಾರ್ಥಿಗಳ ಮೇಲುಗೈ: ಮೂರು ವಿಭಾಗಗಳ ವಿದ್ಯಾರ್ಥಿಗಳ ಪೈಕಿ ನಿರೀಕ್ಷೆಯಂತೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಈ ಬಾರಿಯ ಫಲಿತಾಂಶದಲ್ಲಿ ಸ್ಪಷ್ಟ ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ 8336 ಮಂದಿಯಲ್ಲಿ 8006 ಮಂದಿ ಉತ್ತೀರ್ಣರಾಗುವ ಮೂಲಕ ಶೇ.98.44ರಷ್ಟು ಫಲಿತಾಂಶ ಪಡೆದಿದ್ದಾರೆ.

ಇನ್ನು ವಾಣಿಜ್ಯ ವಿಭಾಗದಲ್ಲಿ 7173 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 6866 (ಶೇ.95.72) ಮಂದಿ ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 1115 ಮಂದಿ ವಿದ್ಯಾರ್ಥಿಗಳಲ್ಲಿ 952 ಮಂದಿಯಷ್ಟೇ (ಶೇ.85.38) ಉತ್ತೀರ್ಣರಾಗಿದ್ದಾರೆ.

ಆಳ್ವಾಸ್ ಕಾಲೇಜಿನ ದಿಶಾ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳನ್ನು ಪಡೆದಿದ್ದು, ಬೆಂಗಳೂರಿನ ಎಸ್‌ಬಿ ಮಹಾವೀರ ಜೈನ್ ಪಿಯು ಕಾಲೇಜಿನ ಅದಿತಿ ಎ. ಬಾಪು ಅವರೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ದ.ಕ. ಜಿಲ್ಲೆಯ ಆಕಾಶಭವನದ ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ ಪ್ರಿನ್ಸಿಲ್ಲಾ ಕಾರ್ಡೋಜಾ 599 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪ್ರಿನ್ಸಿಲ್ಲಾ ಕಾರ್ಡೋಜಾ ಪ್ರಥಮ: ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ದಿನ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಿನ್ಸಿಲ್ಲಾ ಕಾರ್ಡೋಜಾ 599 ಅಂಕಗಳನ್ನು ಪಡೆದು, ವಿಭಾಗದಲ್ಲಿಯೇ ರಾಜ್ಯ ಪ್ರಥಮ ಸ್ಥಾನ ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿರಾಮ್ ವಿ ಭಟ್, ಬೆಂಗಳೂರಿನ ಎಂಜೆಲ್ ತಿವಾರಿ ಸೇರಿದಂತೆ 12 ಮಂದಿ ತಲಾ 598 ಅಂಕಗಳನ್ನು ಪಡೆದು ಪರೀಕ್ಷೆ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗ: ಕಲಾ ವಿಭಾಗದಲ್ಲಿ ಬಳ್ಳಾರಿಯ ಅರ್ಚನಾ, ಸಂಗೀತಾ, ಕಲಬುರಗಿಯ ಸೃಷ್ಟಿ ತಲಾ 598 ಅಂಕಗಳನ್ನು ಪಡೆದಿದ್ದು, ವಿಭಾಗದಲ್ಲಿ ಪ್ರಥಮ ಸ್ಥನ ಬಂದಿದ್ದಾರೆ. ದಕ್ಷಿಣ ಕನ್ನಡದ ಫಾತೀಮಾತ್ ಶಹ್ಲಾ, ಬಾಗಲಕೋಟೆಯ ಮಹಮದಯನ್ ನದಾಫ್ ಸೇರಿ ಐದು ಮಂದಿ ತಲಾ 595 ಅಂಕಗಳನ್ನು ಪಡೆದಿದ್ದಾರೆ.

Leave a Comment

Your email address will not be published. Required fields are marked *