ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ ನಿಂದ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು ಗಂಭೀರ

ಸಮಗ್ರ ನ್ಯೂಸ್: ಶಾಲೆಗೆ ತೆರಳುತ್ತಿದ್ದ ಇಬ್ಬರು ಸಹೋದರಿಯರು ಕೆಎಸ್‌ಆರ್‌ಟಿಸಿ ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ‘ರೇಷ್ಮೆ ರೋಡ್’ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

Ad Widget ... ..

ಬೆಳ್ತಂಗಡಿಯ ನ್ಯಾಯತರ್ಪು ಗ್ರಾಮದ ಕಲಾಯಿತೊಟ್ಟು ನಿವಾಸಿಗಳಾದ ರೂಪ ಮತ್ತು ನಾಗರಾಜ್ ಗೌಡ ದಂಪತಿಯ ಪುತ್ರಿಯರಾದ ಚರಿಷ್ಮಾ (ದ್ವಿತೀಯ ಪಿಯುಸಿ) ಮತ್ತು ಚದ್ಮಿಕಾ (10ನೇ ತರಗತಿ) ಅಪಘಾತಕ್ಕೀಡಾದ ವಿದ್ಯಾರ್ಥಿನಿಯರು. ಇಬ್ಬರೂ ಎಂದಿನಂತೆ ಬೆಳಿಗ್ಗೆ ಗೇರುಕಟ್ಟೆಯಿಂದ ಬೆಳ್ತಂಗಡಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು.

Ad Widget

ಬಸ್ ರೇಷ್ಮೆ ರೋಡ್ ತಲುಪುತ್ತಿದ್ದಂತೆ, ಏಕಾಏಕಿ ಬಸ್‌ನ ಬಾಗಿಲು ತೆರೆದುಕೊಂಡಿದೆ ಎನ್ನಲಾಗಿದೆ. ಈ ವೇಳೆ ಸಮತೋಲನ ತಪ್ಪಿ ಒಬ್ಬಳು ವಿದ್ಯಾರ್ಥಿನಿ ಕೆಳಗೆ ಬೀಳಲು ಹೋದಾಗ, ಆಕೆಯನ್ನು ರಕ್ಷಿಸಲು ಹೋದ ಮತ್ತೊಬ್ಬಳು ಕೂಡ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಘಟನೆಯಿಂದಾಗಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ಧಾವಿಸಿ ಬಂದು ಸಹಕಾರ ನೀಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಬೆಳ್ತಂಗಡಿ ಮತ್ತು ಉಜಿರೆಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಇಬ್ಬರೂ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಗಾಯಗೊಂಡ ವಿದ್ಯಾರ್ಥಿನಿಯರ ಪೈಕಿ ಚದ್ಮಿಕಾ 10ನೇ ತರಗತಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು, ಮತ್ತೊಬ್ಬಳು ದ್ವಿತೀಯ ಪಿಯುಸಿ ಓದುತ್ತಿದ್ದಳು. ಪರೀಕ್ಷೆಯ ಸಂದರ್ಭದಲ್ಲೇ ಇಂತಹ ಘಟನೆ ನಡೆದಿರುವುದು ಪೋಷಕರು ಹಾಗೂ ಸಹಪಾಠಿಗಳಲ್ಲಿ ಆತಂಕ ಮೂಡಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಬಾಗಿಲುಗಳ ಸುರಕ್ಷತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *