ಮಂಗಳೂರು : ಕಾರಿನ ನಂಬರ್ ಪ್ಲೇಟ್ ಬಳಿ ಕೊರಗಜ್ಜನ ಭಾವಚಿತ್ರ ಇದೆ ಎಂದು ಆಕ್ಷೇಪಿಸಿದ ಪೊಲೀಸ್ ಸಿಬ್ಬಂದಿಯ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಬಳಿ ಇಂದು ನಡೆದಿದೆ. ನಗರದ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಮಾರುತಿ 800 ವಾಹನದಲ್ಲಿ ನೋಂದಣಿ ಸಂಖ್ಯೆಯ ಬಳಿ ಕೊರಗಜ್ಜನ ಭಾವಚಿತ್ರವಿತ್ತು. ಆ ಭಾವಚಿತ್ರ ತೆಗೆಯುವಂತೆ ಪೊಲೀಸ್ ಸಿಬ್ಬಂದಿ ಸೂಚಿಸಿದ್ದು, ಈ ವೇಳೆ ದೈವದ ಭಾವಚಿತ್ರ ತೆಗೆಯಲು ಕಾರಿನ ಮಾಲೀಕ ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ಓಂ ಸಾಯಿ, ಸ್ವಾಮಿ ಕೊರಗಜ್ಜ, ಟೀಂ ಪರಶುರಾಮ್ ಎಂಬ ಸ್ಟಿಕ್ಕರ್ ಇದ್ದ ಮಾರುತಿ 800 ಕಾರೊಂದನ್ನ ತೊಕ್ಕೊಟ್ಟು ಫ್ಲೈ ಓವರ್ ಅಡಿಯಲ್ಲಿ ತಡೆದ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಎಎಸ್ಸೈ ರಾಬರ್ಟ್ ಲಸ್ರಾದೊ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ.
ಬಬೀಶ್ ಪೂಜಾರಿ ಎಂಬವರು ಮಾರುತಿ ಕಾರಿನಲ್ಲಿ ತೊಕ್ಕೊಟ್ಟು ಫ್ಲೈಓವರ್ ಹಾದು ಹೋಗುತ್ತಿದ್ದ ಸಂದರ್ಭ ಹೈವೇ ಪೆಟ್ರೋಲಿಂಗ್ ವಾಹನದಲ್ಲಿದ್ದ ಎಎಸ್ಸೈ ರಾಬರ್ಟ್ ಲಸ್ರಾದೊ ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ದಾಖಲೆಗಳು ಸಮರ್ಪಕವಾಗಿದ್ದು ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಅಂಟಿಸಲಾಗಿದ್ದ ಓಂ ಸಾಯಿ, ಸ್ವಾಮಿ ಕೊರಗಜ್ಜ, ಟೀಂ ಪರಶುರಾಮ್ ಎಂಬ ಸ್ಟಿಕ್ಕರ್ ಗಳನ್ನ ಕಳಚಲು ಹೇಳಿದ್ದಾರೆ. ತಪ್ಪಿದಲ್ಲಿ ಅದಕ್ಕೆ ದಂಡ ವಿಧಿಸುವುದಾಗಿ ಹೇಳಿದ್ದಾರೆ.
ವಿಚಲಿತರಾದ ಕಾರು ಚಾಲಕ ಬಬೀಶ್ ಪೂಜಾರಿ ಕೂಡಲೇ ಬಜರಂಗದಳ ಸಂಘಟನಾ ಪ್ರಮುಖರು ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಅವರಲ್ಲಿ ದೂರಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಜೊತೆಗೂ ಎಎಸ್ಸೈ ಲಸ್ರಾದೊ ಅವರು ಉಡಾಫೆಯಿಂದ ಮಾತನಾಡಿದ್ದು ಕೆರಳಿದ ಹಿಂದೂ ಸಂಘಟನೆ ಸದಸ್ಯರು ಜಮಾಯಿಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಗುರುದತ್ ಕಾಮತ್ ಆಗಮಿಸಿ ಮಾತುಕತೆ ನಡೆಸಿದ್ದಾರೆ.
ಕರ್ತವ್ಯದಲ್ಲಿ ಕೋಮುಭಾವನೆ ತೋರಿಸಿದ ಲಸ್ರಾದೊ ಅವರಂತಹ ಅಧಿಕಾರಿಗಳನ್ನ ಕರ್ತವ್ಯದಿಂದ ವಜಾಗೊಳಿಸುವಂತೆ ಚಂದ್ರಹಾಸ ಪಂಡಿತ್ ಹೌಸ್ ಅವರು ಇನ್ಸ್ ಪೆಕ್ಟರ್ ಗುರುದತ್ ಕಾಮತ್ ಅವರಲ್ಲಿ ಒತ್ತಾಯಿಸಿದ್ದಾರೆ.
ಜೊತೆಗೆ ಸ್ಥಳದಲ್ಲಿದ್ದ ಕುಪಿತಗೊಂಡ ಸಾರ್ವಜನಿಕರು ಪೊಲೀಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಉಳ್ಳಾಲ ಠಾಣಾ ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಿ ಚದುರಿಸಿದರು.
ಜೊತೆಗೆ ಸರಿಯಾದ ದಾಖಲೆ ಇಲ್ಲದ ಕಾರಣ ಪೊಲೀಸರು ಕಾರನ್ನು ವಶಪಡಿಕೊಂಡಿದ್ದು, ಕಾರನ್ನು ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.