ಐಪಿಎಲ್ ಕ್ರಿಕೆಟ್| ಪಡಿಕ್ಕಲ್ ಬ್ಯಾಟಿಂಗ್ ಎದುರು ಮುಗ್ಗರಿಸಿದ ಸನ್ ರೈಸರ್ಸ್| ಶುಭಾರಂಭ ಮಾಡಿದ ಆರ್ ಸಿಬಿ

ಸಮಗ್ರ ನ್ಯೂಸ್: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹನ್ನೊಂದು ತಿಂಗಳ ಬಳಿಕ ಮತ್ತೆ ಕ್ರಿಕೆಟ್ ಹಬ್ಬ ಕಳೆಗಟ್ಟಿದೆ. ಮೈದಾನದೆಲ್ಲೆಡೆ ಕೆಂಪು ಸಾಗರವೇ ಹರಿದುಬಂದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ಜೈಕಾರ ಹಾಕಿದರು. ಡಿಜೆ ಸಂಗೀತದ ಅಬ್ಬರ ಹಾಗೂ ದಿವಂಗತ ಪುನೀತ್ ರಾಜಕುಮಾರ್ ಅವರ ನೆನಪಿನ ಹಾಡುಗಳು ಕ್ರೀಡಾಂಗಣದಲ್ಲಿ ಮಾರ್ದನಿಸಿದವು

Ad Widget ... ..

19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್ ಆರ್ ಸಿ ಬಿ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಗೆಲುವಿನ ಅಭಿಯಾನ ಆರಂಭಿಸಿದೆ.

Ad Widget

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಹೈದರಾಬಾದ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ ಕೇವಲ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 80 ರನ್ ಚಚ್ಚಿ ಆರ್ ಸಿ ಬಿ ಬೌಲರ್ ಗಳ ಬೆವರಿಳಿಸಿದರು. ಹೆನ್ರಿಚ್ ಕ್ಲಾಸೆನ್ ಜೊತೆಗೂಡಿ 97 ರನ್ ಗಳ ಜೊತೆಯಾಟವಾಡಿದರು. ಆದರೆ ಅಂತಿಮ ಹಂತದಲ್ಲಿ ಅಂಕಿತ್ ವರ್ಮಾ ಅವರ ಅದ್ಭುತ ಬ್ಯಾಟಿಂಗ್ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿತು.

ಆರ್ ಸಿ ಬಿ ಪರ ಪದಾರ್ಪಣೆ ಮಾಡಿದ ಕಿವೀಸ್ ವೇಗಿ ಜೇಕಬ್ ಡಫಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಮ್ಯಾಜಿಕ್ ಮಾಡಿದರು. ಐಪಿಎಲ್ ಮಿನಿ ಹರಾಜಿನಲ್ಲಿ 2 ಕೋಟಿ ರೂಗಳಿಗೆ ಬಿಕರಿಯಾಗಿದ್ದಾಗ ವ್ಯಕ್ತವಾಗಿದ್ದ ಅಚ್ಚರಿಗೆ ಅವರು ತಮ್ಮ ಬೌಲಿಂಗ್ ಮೂಲಕವೇ ಉತ್ತರ ನೀಡಿದರು. ಅನುಭವಿ ಜೋಶ್ ಹೇಜಲ್ ವುಡ್ ಗೈರಿನಲ್ಲಿ ಬೌಲಿಂಗ್ ಜವಾಬ್ದಾರಿ ಹೊತ್ತ ಡಫಿ, ತಮ್ಮ ನಿಖರವಾದ ಶಾರ್ಟ್ ಪಿಚ್ ಎಸೆತಗಳ ಮೂಲಕ ಕೇವಲ 22 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸಿಕ್ಸರ್ ಮೂಲಕವೇ ಖಾತೆ ತೆರೆಯುವ ಹವ್ಯಾಸ ಹೊಂದಿರುವ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ಅವರನ್ನು ಪೆವಿಲಿಯನ್ ಗೆ ಅಟ್ಟುವಲ್ಲಿ ಡಫಿ ಯಶಸ್ವಿಯಾದರು.

ಪಂದ್ಯದ 16ನೇ ಓವರ್ ನಲ್ಲಿ ಆರ್ ಸಿ ಬಿ ಆಟಗಾರ ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಪಂದ್ಯದ ಹೈಲೈಟ್ಸ್ ಆಗಿತ್ತು. ಅಭಿನಂದನ್ ಸಿಂಗ್ ಅವರ ಎಸೆತದಲ್ಲಿ ಬೌಂಡರಿ ಬಾರಿಸಲು ಮುಂದಾದ ಇಶಾನ್ ಕಿಶನ್ ಅವರ ಚೆಂಡನ್ನು ಪಾಯಿಂಟ್ ವಿಭಾಗದಲ್ಲಿ ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಫಿಲ್ ಸಾಲ್ಟ್ ಕ್ಯಾಚ್ ಹಿಡಿದ ರೀತಿ ಇಡೀ ಕ್ರೀಡಾಂಗಣವೇ ಬೆರಗಾಗುವಂತೆ ಮಾಡಿತು. ಇದರಿಂದಾಗಿ ಇಶಾನ್ ಶತಕದ ಕನಸು ಭಗ್ನಗೊಂಡಿತು.

ಬೆಟ್ಟದಂತಿದ್ದ 202 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಆರ್ ಸಿ ಬಿ ತಂಡಕ್ಕೆ ಆರಂಭಿಕ ಆಘಾತ ಎದುರಾದರೂ, ಸ್ಥಳೀಯ ಪ್ರತಿಭೆ ದೇವದತ್ತ ಪಡಿಕ್ಕಲ್ ಮತ್ತು ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಹೈದರಾಬಾದ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 26 ಎಸೆತಗಳಲ್ಲಿ 61 ರನ್ ಸಿಡಿಸಿದ ಪಡಿಕ್ಕಲ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇವರಿಬ್ಬರ 101 ರನ್ ಗಳ ದ್ವಿತೀಯ ವಿಕೆಟ್ ಜೊತೆಯಾಟ ಪಂದ್ಯದ ಗತಿಯನ್ನೇ ಬದಲಿಸಿತು. ಬಹಳ ದಿನಗಳ ನಂತರ ಚಿನ್ನಸ್ವಾಮಿಯಲ್ಲಿ ವಿರಾಟ್ ಅವರ ಲವಲವಿಕೆಯ ಆಟವನ್ನು ಅಭಿಮಾನಿಗಳು ಕಣ್ತುಂಬಿಕೊಂಡರು.

ಎಂಟನೇ ಓವರ್ ನಲ್ಲಿ ಕ್ಲಾಸೆನ್ ಕೈಚೆಲ್ಲಿದ ಕ್ಯಾಚ್ ನಿಂದ ಜೀವದಾನ ಪಡೆದ ಕಿಂಗ್ ಕೊಹ್ಲಿ ತಮ್ಮ ಎಂದಿನ ಕ್ಲಾಸಿಕ್ ಬ್ಯಾಟಿಂಗ್ ಮೂಲಕ ಕೇವಲ 38 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಯಕ ರಜತ್ ಪಾಟೀದಾರ್ ಕೇವಲ 12 ಎಸೆತಗಳಲ್ಲಿ 31 ರನ್ ಸಿಡಿಸಿ ಅಬ್ಬರಿಸಿದರೆ, ಟಿಮ್ ಡೇವಿಡ್ ಜೊತೆಗಿನ ಕೊಹ್ಲಿಯ 40 ರನ್ ಗಳ ಜೊತೆಯಾಟದಿಂದ ಆರ್ ಸಿ ಬಿ ಕೇವಲ 15.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿ ವಿಜಯದ ನಗು ಬೀರಿತು.

ಕಳೆದ ವರ್ಷ ಆರ್ ಸಿ ಬಿ ಗೆದ್ದಾಗ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥ ಕ್ರೀಡಾಂಗಣದ ಪಿ ಒನ್ ಗ್ಯಾಲರಿಯಲ್ಲಿ 11 ಆಸನಗಳನ್ನು ಖಾಲಿ ಬಿಟ್ಟು ಪುಷ್ಪ ನಮನ ಸಲ್ಲಿಸಲಾಯಿತು. ಜೊತೆಗೆ ಪಂದ್ಯಕ್ಕೂ ಮುನ್ನ ಮೃತರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ಈ ಸಂಪ್ರದಾಯ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಮುಂದುವರೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರ ರಾಷ್ಟ್ರಗೀತೆಯೊಂದಿಗೆ ಪಂದ್ಯ ಆರಂಭವಾಯಿತು. ಭದ್ರತೆಗಾಗಿ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರು ಹಾಗೂ ಕಮಾಂಡೊಗಳನ್ನು ನಿಯೋಜಿಸಲಾಗಿತ್ತು. ಈ ಅದ್ಧೂರಿ ಉದ್ಘಾಟನಾ ಪಂದ್ಯಕ್ಕೆ ಐಸಿಸಿ ಮುಖ್ಯಸ್ಥ ಜಯ್ ಶಾ, ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ಖಜಾಂಚಿ ರಘುರಾಮ್ ಭಟ್ ಹಾಗೂ ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಹಾಜರಿದ್ದು ಪಂದ್ಯದ ಶೋಭೆ ಹೆಚ್ಚಿಸಿದರು.

Leave a Comment

Your email address will not be published. Required fields are marked *