ಡಿಜಿಪಿ‌ ರಾಮಚಂದ್ರ ರಾವ್ ಪ್ರಣಯ ಪ್ರಸಂಗ ಅಸಲಿ| ತನಿಖೆಯಲ್ಲಿ ಬಯಲಾಯ್ತು ಸತ್ಯ

ಸಮಗ್ರ ನ್ಯೂಸ್: ಕಚೇರಿಯಲ್ಲಿ ಪೊಲೀಸ್‌ ಸಮವಸ್ತ್ರದಲ್ಲೇ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿ ಅಮಾನತುಗೊಂಡಿರುವ ಡಿಜಿಪಿ ಕೆ.ರಾಮಚಂದ್ರರಾವ್‌ ಅವರ ಪ್ರಣಯ ವಿಡಿಯೋಗಳು ನೈಜವೆಂದು ತನಿಖಾ ತಂಡವು ರಾಜ್ಯ ಸರಕಾರಕ್ಕೆ 100 ಪುಟಗಳ ವರದಿ ಸಲ್ಲಿಸಿದೆ. ರಾಮಚಂದ್ರರಾವ್‌ ಅಸಭ್ಯವಾಗಿ ವರ್ತಿಸಿರುವ ವಿಡಿಯೋಗಳು ಕೆಲ ತಿಂಗಳ ಹಿಂದೆ ಜಾಲತಾಣದಲ್ಲಿ ಬಹಿರಂಗವಾಗಿ ಭಾರೀ ಸಂಚಲನ ಸೃಷ್ಟಿಸಿ ಸರಕಾರಕ್ಕೆ ಹಾಗೂ ಪೊಲೀಸ್‌ ಇಲಾಖೆಗೆ ತೀವ್ರ ಮುಜುಗರವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ, ಉನ್ನತ ತನಿಖೆಗೆ ಆದೇಶಿಸಿತ್ತು.

Ad Widget ... ..

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದಲ್ಲಿ ನಾಲ್ವರು ಐಪಿಎಸ್‌ ಅಧಿಕಾರಿಗಳ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಈ ತಂಡವು ‘ಆ ವಿಡಿಯೊಗಳಲ್ಲಿನ ದೃಶ್ಯಾವಳಿಗಳು ಯಾವುದೇ ರೀತಿಯ ಡೀಪ್‌ ಫೇಕ್‌, ಕೃತಕ ಬುದ್ಧಿಮತ್ತೆ (ಎಐ) ನಿರ್ಮಿತ ಅಥವಾ ಎಡಿಟ್‌ ಮಾಡಲಾದ ದೃಶ್ಯಗಳಲ್ಲ’ ಎಂದು ಸಮಗ್ರ ತನಿಖೆ ನಡೆಸಿ ಸರಕಾರಕ್ಕೆ ಬರೋಬ್ಬರಿ 100 ಪುಟಗಳ ವರದಿ ಸಲ್ಲಿಸಿ ರಾಸಲೀಲೆ ವಿಡಿಯೊಗಳ ಅಸಲಿಯತ್ತನ್ನು ಬಯಲು ಮಾಡಿದೆ.

Ad Widget

ಜಾಲತಾಣದಲ್ಲಿ ವೈರಲ್‌ ಆಗಿದ್ದ ವಿಡಿಯೊಗಳನ್ನು ಎಸ್‌ಐಟಿ, ಹೆಚ್ಚಿನ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿತ್ತು. ಪರಿಶೀಲನೆಯಲ್ಲಿ ಈ ವಿಡಿಯೊಗಳು ಡೀಪ್‌ ಫೇಕ್‌ ಅಥವಾ ಎಐ ಸೃಷ್ಟಿಯಲ್ಲ. ವಿಡಿಯೊಗಳಲ್ಲಿನ ಯಾವುದೇ ದೃಶ್ಯಾವಳಿಯನ್ನು ತಿರುಚಿಲ್ಲ ಎಂಬುದು ಸಾಬೀತಾಗಿದೆ.

ರಾಮಚಂದ್ರರಾವ್‌ ಅವರು 2016-17ರ ಅವಧಿಯಲ್ಲಿ ಬೆಳಗಾವಿ ವಲಯ ಐಜಿಪಿಯಾಗಿದ್ದಾಗ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅವರದೇ ಕಚೇರಿಯಲ್ಲಿಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಐಜಿಪಿ ಕಚೇರಿಯೊಳಗೆ ನಡೆದಿರುವ ಈ ಘಟನೆ ಸಂಪೂರ್ಣ ಸತ್ಯವಾಗಿದೆ. ಆಗ ಅಲ್ಲಿ ಕೆಲಸ ಮಾಡುತ್ತಿದ್ದ ಚಾಲಕರು ಹಾಗೂ ಕಚೇರಿ ಸಿಬ್ಬಂದಿ, ವೈರಲ್‌ ಆಗಿರುವ ವಿಡಿಯೊಗಳಲ್ಲಿರುವ ಇಬ್ಬರು ಮಹಿಳೆಯರನ್ನು ಗುರುತಿಸಿದ್ದಾರೆ. ಅಲ್ಲದೆ, ಆ ಮಹಿಳೆಯರು ಹಲವು ಬಾರಿ ರಾಮಚಂದ್ರರಾವ್‌ರ ಕಚೇರಿಗೆ ಬಂದು ಹೋಗಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.

ಆ ಮಹಿಳೆಯರ ಪೈಕಿ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಉದ್ದೇಶಪೂರ್ವಕವಾಗಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು ಎಂದು ಎಸ್‌ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಡಿಯೊಗಳು ಬಯಲಾಗುತ್ತಿದ್ದಂತೆ ಇಬ್ಬರೂ ಮಹಿಳೆಯರು ದಿಢೀರ್‌ ನಾಪತ್ತೆಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಪ್ರಕರಣದ ಮುಂದಿನ ತನಿಖೆ ಹಾಗೂ ಕಾನೂನು ಪ್ರಕ್ರಿಯೆಗಳಿಗೆ ಆ ಮಹಿಳೆಯರ ಹೇಳಿಕೆ ನಿರ್ಣಾಯಕವಾಗಿದೆ. ಹೀಗಾಗಿ, ಅವರ ಪತ್ತೆಗೆ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *