ಮಂಗಳೂರು: ಕೈದಿಗಳ‌ ವಿರುದ್ದ ಎಫ್ಐಆರ್

ಸಮಗ್ರ ನ್ಯೂಸ್: ಮಂಗಳೂರು ‘ನಗರದ ಕೊಡಿಯಾಲ್‌ ಬೈಲಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಬ್ಬರು ನನ್ನ ಮೇಲೆ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ, ಸ್ವತ್ತುಗಳನ್ನು ಹಾನಿಗೊಳಿಸಿ ದಾಂದಲೆ ನಡೆಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇನ್ನೊಬ್ಬ ಕೈದಿ ಅವರನ್ನು ಪ್ರಚೋದಿಸಿದ್ದ’ ಎಂದು ಆರೋಪಿಸಿ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ದೂರು ನೀಡಿದ್ದು, ಬರ್ಕೆ ಠಾಣೆಯಲ್ಲಿ ಮೂವರು ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Ad Widget ... ..

‘ಇದೇ 13ರಂದು ಶುಕ್ರವಾರ ರಾತ್ರಿ ವಿಚಾರಣಾ ಕೈದಿ ಮೊಹಮ್ಮದ್ ಇಕ್ಬಾಲ್ ನನ್ನ ಕಚೇರಿಗೆ ಬಂದು ಕಾರಾಗೃಹಕ್ಕೆ ಹೊಸದಾಗಿ ದಾಖಲಾಗುವ ಕೈದಿಗಳನ್ನು ತನ್ನ ಕೊಠಡಿಗೆ ಸೇರಿಸಬೇಕು ಎಂದು ಜೋರಾಗಿ ಕೂಗಾಡಿದ್ದ. ಅವಾಚ್ಯ ಶಬ್ದಗಳಿಂದ ನನಗೆ ನಿಂದಿಸಿದ್ದ. ನಾನು ಹಾಗೂ ಸಹ ಸಿಬ್ಬಂದಿ ಆತನನ್ನು ಸಮಾಧಾನ ಪಡಿಸಲು ಯತ್ನಿಸಿದ್ದೆವು. ಆಗ ಆತ ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ. ಇದೇ ವೇಳೆ ಇನ್ನೊಬ್ಬ ವಿಚಾರಣಾಧೀನ ಕೈದಿ ಮೊಹಮ್ಮದ್ ಆಫ್ರೀದ್ ಕೂಡ ಆತನ ಜೊತೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅಲ್ಲದೇ ಜೈಲಿನಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯಿಂದ ನನ್ನ ಮೇಲೆ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದ’ ಎಂದು ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Ad Widget

‘ಆರೋಪಿಗಳಿಬ್ಬರು ಸೇರಿ ಜೈಲಿನ ಆರ್.ಒ ಫಿಲ್ಟರ್‌ ಸಾಧನವನ್ನು ಅದರ ಪೈಪ್ ಅನ್ನು ಧ್ವಂಸ ಮಾಡಿದ್ದು, ಅದರ ಮೌಲ್ಯ ₹ 12 ಸಾವಿರ ಎಂದು ಅಂದಾಜಿಸಲಾಗಿದೆ. ‘ಎ’ ವಿಭಾಗದ 3ನೇ ಕೊಠಡಿಯ ವಿಚಾರಣಾಧೀನ ಕೈದಿ ಶೇಹರಾಜ್ ಅಲಿಯಾಸ್‌ ಶಾರೂಕ್ ಎಂಬಾತ ತಾನು ಉಳಿದುಕೊಂಡಿದ್ದ ಕೊಠಡಿಯಲ್ಲಿ ಹಾಸಿಗೆ ಮತ್ತು ಹೊದಿಕೆಗಳಿಗೆ ಬೆಂಕಿ ಹಚ್ಚಿದ್ದಾನೆ. ಅಲ್ಲಿದ್ದ ಕೇರಮ್ ಬೋರ್ಡ್ ಮುರಿದು, ಅದರ ರೀಪ್‌ ಅನ್ನು ಆರೋಪಿಗಳಾದ ಮೊಹಮ್ಮದ್ ಇಕ್ಬಾಲ್ ಮತ್ತು ಮೊಹಮ್ಮದ್ ಆಪ್ರೀದ್‌ಗೆ ನೀಡಿ ನನಗೆ ಮತ್ತು ಸಿಬ್ಬಂದಿಗೆ ಹಲ್ಲೆ ಮಾಡಲು ಯತ್ನಿಸಿದ್ದ’ ಎಂದೂ ಜೈಲಿನ ಅಧೀಕ್ಷಕರು ಆರೋಪಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *