ಸಮಗ್ರ ನ್ಯೂಸ್: ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎಸಿಪಿ (ACP) ನೀಡಿದ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಮತ್ತು ಆಡಿಯೋ ತುಣುಕುಗಳಲ್ಲಿ ಇನ್ಸ್‌ಪೆಕ್ಟರ್ ಅವರ ವರ್ತನೆ ಅತ್ಯಂತ ಅನುಮಾನಾಸ್ಪದವಾಗಿತ್ತು. ವಿಶೇಷವಾಗಿ ಫೋನ್‌ನಲ್ಲಿ ಮಹಿಳೆಯೊಬ್ಬರ ಜೊತೆ ಅವರು ನಡೆಸಿದ ಅಸಭ್ಯ ಸಂಭಾಷಣೆಯು ಪೊಲೀಸ್ ಇಲಾಖೆಯ ಘನತೆಗೆ ಕುಂದು ತಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಅವರು ಸುದೀರ್ಘ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸುಮತಿ ನಾಯಕ್ ಮತ್ತು ಅವಿತಾ ಮಿನಾಜೆಸ್ ಅವರ ಪ್ರಕರಣಗಳ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸುಮತಿ ನಾಯಕ್ ಮತ್ತು ಅವರ ಸಹೋದರಿಯ ನಡುವೆ ಕೌಟುಂಬಿಕ ಕಲಹಗಳಿದ್ದು, ಇಬ್ಬರ ವಿರುದ್ಧವೂ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇನ್ಸ್‌ಪೆಕ್ಟರ್ ವಿರುದ್ಧವೂ ಇವರು ದೂರು ನೀಡಿದ್ದು, ಪ್ರಸ್ತುತ ಪ್ರಕರಣಗಳು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ (Stay) ಪಡೆದುಕೊಂಡಿವೆ.







