ಸಮಗ್ರ ನ್ಯೂಸ್: ರಾಜ್ಯದ 13 ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಆರ್ಭಟಿಸಿದೆ. ಕೊಪ್ಪಳದಲ್ಲಿ ಸಿಡಿಲಿಗೆ ಬಾಲಕ ಬಲಿಯಾಗಿದ್ದಾನೆ. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಕೆಲವು ಕಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಹಾಸನದಲ್ಲಿ ಭಾರಿ ಗಾಳಿಗೆ ಮರದ ರಂಬೆ ಕೊಂಬೆಗಳು ಬಿದ್ದಿವೆ. ಮೈಸೂರು, ಚಾಮರಾಜನಗರ, ದಾವಣಗೆರೆ, ಹರಿಹರ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಚಾಮರಾಜನಗರದ ಹಲವಡೆ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪಿನ ಅನುಭವವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಕೆಲವು ಕಡೆ ಸಿಡಿಲು, ಗುಡುಗು ಆಲಿಕಲ್ಲು ಸಹಿತ ಮಳೆಯಾಗಿದೆ. ಮೈಸೂರಿನ ಬೆಟ್ಟದಪುರದಲ್ಲಿ ಸಿಡಿಲು ಸಹಿತ ಮಳೆಯಾಗಿದೆ. ಕೊಪ್ಪಳದ ಯಲಬುರ್ಗಾ ತಾಲೂಕಿನಲ್ಲಿ ಸಿಡಿಲು ಬಡಿದು 8ನೇ ತರಗತಿಯ ಮಂಜುನಾಥ(14) ಮೃತಪಟ್ಟಿದ್ದಾನೆ.
ವಿಜಯನಗರ ಜಿಲ್ಲೆಯ ಕೊಟ್ಟೂರು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ. ಹಾಸನ ಸೇರಿ ಆಲೂರು ತಾಲೂಕಿನ ಹಲವು ಕಡೆ ಆಲಿಕಲ್ಲು ಸಹಿತ ಭಾರಿ ಗುಡುಗು ಸಿಡಿಲಿನೊಂದಿಗೆ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಬೆಳ್ತಂಗಡಿ, ಧರ್ಮಸ್ಥಳ, ಪುತ್ತೂರು, ಸುಳ್ಯ ಬಂಟ್ವಾಳದಲ್ಲಿ ಮಳೆಯ ಅಬ್ಬರದ ಜೊತೆಗೆ ಗಾಳಿಯೂ ಜೋರಾಗಿ ಬೀಸಿತ್ತು. ನಗರದಲ್ಲಿ ಹಾಗೂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ರಾತ್ರಿ ವೇಳೆ ತುಂತುರು ಮಳೆಯಾಗಿದೆ.
ಭಾರಿ ಮಳೆಯಿಂದಾಗಿ, ನಗರದಲ್ಲಿ, ಪುತ್ತೂರು ಹಾಗೂ ಬಂಟ್ವಾಳ ತಾಲ್ಲೂಕಿನ ಕೆಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸಿದರು.







