ಅಯತುಲ್ಲಾ ಅಲಿ ಖಾಮಿನೈ ಪುತ್ರ ಮೊಜ್ತಬಾ ಖಾಮಿನೈ ಇರಾನ್ ನ ಸರ್ವೋಚ್ಚ ನಾಯಕನಾಗಿ ನೇಮಕ

ಸಮಗ್ರ ನ್ಯೂಸ್: ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಅವರ ಪುತ್ರ ಮೊಜ್ತಬಾ ಖಾಮಿನೈ ಅವರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಬುಧವಾರದ ಮಾಧ್ಯಮ ವರದಿ ತಿಳಿಸಿದೆ. ಇರಾನ್‌ನ ತಜ್ಞರ ಸಭೆಯು ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದು, ಪ್ರಭಾವಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (ಐಆರ್‌ಜಿಸಿ) ಒತ್ತಡದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ‘ಇರಾನ್ ಇಂಟರ್‌ನ್ಯಾಷನಲ್’ ವರದಿ ಹೇಳಿದೆ.

Ad Widget ... ..

56 ವರ್ಷದ ಮೊಜ್ತಬಾ ಖಾಮಿನೈ, ದಿವಂಗತ ಅಲಿ ಖಾಮಿನೈ ಅವರ ಎರಡನೇ ಪುತ್ರರು. ಹಲವು ವರ್ಷಗಳಿಂದ ತೆರೆಮರೆಯಲ್ಲಿ ಪ್ರಭಾವಿ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಐಆರ್‌ಜಿಸಿ ಹಾಗೂ ಬಸಿಜ್ ಅರೆಸೈನಿಕ ಜಾಲಗಳ ಮೇಲೆ ಆಳವಾದ ಪ್ರಭಾವ ಹೊಂದಿದ್ದಾರೆ ಎಂಬ ವರದಿಗಳಿವೆ. ಇರಾನ್–ಇರಾಕ್ ಯುದ್ಧದ ಅನುಭವಿಯೂ ಆಗಿರುವ ಅವರು, ದೇಶದ ಭದ್ರತಾ ವ್ಯವಸ್ಥೆಯೊಂದಿಗೆ ನಿಕಟ ಸಮನ್ವಯ ಹೊಂದಿದ್ದಾರೆ ಎನ್ನಲಾಗಿದೆ.

Ad Widget

ಆದರೆ ಧರ್ಮಗುರುಗಳ ವಲಯದಲ್ಲಿ ಆನುವಂಶಿಕ ಉತ್ತರಾಧಿಕಾರದ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಸರ್ವೋಚ್ಚ ಸ್ಥಾನಕ್ಕೇರಲು ಸಾಂಪ್ರದಾಯಿಕವಾಗಿ ಅಗತ್ಯವಿರುವ ಉನ್ನತ ಧಾರ್ಮಿಕ ಪದವಿ ಹಾಗೂ ಔಪಚಾರಿಕ ನಾಯಕತ್ವದ ಅನುಭವ ಮೊಜ್ತಬಾ ಅವರಿಗೆ ಇಲ್ಲ ಎಂಬ ಟೀಕೆಗಳು ಕೇಳಿಬಂದಿವೆ.

ಇರಾನ್‌ನ ಸರ್ವೋಚ್ಚ ನಾಯಕ ಸ್ಥಾನವು ಶಿಯಾದ ಕೇಂದ್ರಬಿಂದುವಾಗಿದ್ದು, ದೇಶದ ಎಲ್ಲಾ ಪ್ರಮುಖ ವಿಷಯಗಳ ಮೇಲೆ ಅಂತಿಮ ನಿರ್ಧಾರಾಧಿಕಾರ ಹೊಂದಿದೆ. ಈ ಹುದ್ದೆಯಲ್ಲಿ ಸಶಸ್ತ್ರ ಪಡೆಗಳು ಹಾಗೂ ಐಆರ್‌ಜಿಸಿಯ ಕಮಾಂಡರ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯೂ ಸೇರಿದೆ.

ಶನಿವಾರ ಇಸ್ರೇಲ್–ಅಮೆರಿಕ ಸಂಯುಕ್ತ ದಾಳಿಯಲ್ಲಿ ಅಲಿ ಖಾಮಿನೈ ಹತ್ಯೆಯಾಗಿದ್ದು, ಈ ಬೆಳವಣಿಗೆ ಇಡೀ ಪ್ರದೇಶವನ್ನು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ತೀವ್ರ ಸಂಘರ್ಷದ ದಿಕ್ಕಿನಲ್ಲಿ ತಳ್ಳಿತು. 1989ರಲ್ಲಿ ಇಸ್ಲಾಮಿಕ್ ಗಣರಾಜ್ಯದ ಸ್ಥಾಪಕ ಅಯತುಲ್ಲಾ ರುಹೊಲ್ಲಾ ಖಾಮಿನೈ ಅವರ ನಿಧನದ ಬಳಿಕ ಅಲಿ ಖಾಮಿನೈ ದೇಶದ ನೇತೃತ್ವ ವಹಿಸಿದ್ದರು.

ಟೆಹ್ರಾನ್ ಹಾಗೂ ಇತರ ನಗರಗಳ ಮೇಲಿನ ದಾಳಿಗಳ ನಂತರ, ಇರಾನ್ ಈ ಪ್ರದೇಶದಲ್ಲಿ ಅಮೆರಿಕ ಸೈನಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಲು ಆರಂಭಿಸಿದೆ. ಇದರ ಪರಿಣಾಮವಾಗಿ ಸೌದಿ ಅರೇಬಿಯಾ, ಬಹ್ರೇನ್, ಖತರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಪ್ರಮುಖ ಗಲ್ಫ್ ರಾಷ್ಟ್ರಗಳು ಇರಾನಿನ ದಾಳಿಗಳ ನಂತರ ಸಂಭವಿಸಿದ ಸ್ಫೋಟಗಳಿಂದ ನಡುಗಿವೆ ಎಂದು ವರದಿಗಳು ತಿಳಿಸಿವೆ.

Leave a Comment

Your email address will not be published. Required fields are marked *