ಕಡಬ ಮೂಲದ ಯುವಕ ಐರ್ಲೆಂಡ್ ನಲ್ಲಿ ನಿಗೂಢ ಸಾವು

ಸಮಗ್ರ ನ್ಯೂಸ್: ಉದ್ಯೋಗಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಯುವಕರೊಬ್ಬರು ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

Ad Widget ... ..

ಮೃತರನ್ನು ಕಡಬದ ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸುನಿಲ್ ಅವರ ಪುತ್ರ ಸಾಂಜೋ ಸುನಿಲ್ (31) ಎಂದು ಗುರುತಿಸಲಾಗಿದೆ. ಇವರು ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ಪ್ರದೇಶದಲ್ಲಿ ವಾಸವಾಗಿದ್ದರು.

Ad Widget

ಗುರುವಾರ ಸಾಂಜೋ ಸುನಿಲ್ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಐರಿಶ್ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದ್ದರೂ, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಪೊಲೀಸರು ಇದನ್ನು ಸಂಶಯಾಸ್ಪದ ಸಾವು ಎಂದು ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಸಾಂಜೋ ಅವರ ಪತ್ನಿ ತೀವ್ರ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿರುವುದಾಗಿ ತಿಳಿದು ಬಂದಿದೆ.

ಪ್ರಸ್ತುತ ಐರಿಶ್ ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರುವ ಕುರಿತು ಕುಟುಂಬಸ್ಥರು ಅಧಿಕಾರಿಗಳ ನೆರವು ಕೋರುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ವರ್ಷದ ಹಿಂದಷ್ಟೇ ಸಾಂಜೋ ಸುನಿಲ್ ಅವರ ಮದುವೆಯಾಗಿತ್ತು. ಪತ್ನಿ ಲಿಷ್ಮಾ ಫಿಲಿಪ್ ಅವರು ಐರ್ಲೆಂಡ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯ ಬಳಿಕ ಹಿಂದೆ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದ ಸ್ಯಾಂಜೋ ಸುನಿಲ್ ಅಲ್ಲಿನ ಕೆಲಸವನ್ನು ಬಿಟ್ಟು ಐರ್ಲೆಂಡ್ ನಲ್ಲಿ ಕೆಲಸ ಮಾಡುವುದಕ್ಕಾಗಿ ತಿಂಗಳ ಹಿಂದಷ್ಟೇ ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ, ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *