ಸಮಗ್ರ ನ್ಯೂಸ್: ಬಿಜೆಪಿ ನಾಯಕ ವೈ.ಖೇಮಚಂದ್ ಸಿಂಗ್ (62) ಅವರು ಮಣಿಪುರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ, ಸಿಂಗ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಇದೇ ವೇಳೆ ಕುಕಿ ಸಮುದಾಯದ ಮಹಿಳಾ ನಾಯಕಿ, ಬಿಜೆಪಿ ಶಾಸಕಿ ನೆಮ್ಚಾ ಕಿಪ್ಗೆನ್ ಹಾಗೂ ನಾಗಾ ಪೀಪಲ್ಸ್ ಫ್ರಂಟ್‌ನ ಶಾಸಕರಾದ ಎಲ್. ದಿಖೂ ಅವರೂ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಜೆಪಿಯ ಗೋವಿಂದಾಸ್ ಕೋಂಥೌಜಾಮ್ ಹಾಗೂ ಎನ್‌ಪಿಪಿಯ ಲೋಕೆನ್ ಸಿಂಗ್ ಅವರೂ ಸಚಿವರಾಗಿ ಪದಗ್ರಹಣಗೊಂಡಿದ್ದಾರೆ. ಕಿಪ್ಗೆನ್ ಅವರು ನವದೆಹಲಿಯಲ್ಲಿರುವ ಮಣಿಪುರ ಭವನದಿಂದಲೇ ವರ್ಚುವಲ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಲ್ಲಿನ ಲೋಕಭವನದಲ್ಲಿ ಪ್ರಮಾಣವಚನ ಸಮಾರಂಭ ನಡೆದಿದ್ದು, ಬಿಜೆಪಿಯ ಶಾಸಕರು, ಪದಾಧಿಕಾರಿಗಳು ಹಾಗೂ ರಾಜ್ಯದಲ್ಲಿರುವ ಎನ್‌ಡಿಎ ಮೈತ್ರಿಕೂಟದ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಖೇಮಚಂದ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು ಎಂಬುದು ಗಮನಾರ್ಹ.







