ಸಮಗ್ರ ನ್ಯೂಸ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026ರ ಬಜೆಟ್ನಲ್ಲಿ ಮಧ್ಯಮ ವರ್ಗದವರಿಗೆ ಹಲವು ಸಿಹಿ ಸುದ್ದಿಗಳು ಸಿಕ್ಕಿವೆ. ಮುಖ್ಯವಾಗಿ ‘ಮೇಕ್ ಇನ್ ಇಂಡಿಯಾ’ಗೆ ಒತ್ತು ನೀಡುವ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಔಷಧಿಗಳ ಬೆಲೆಯನ್ನು ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.
ಏಪ್ರಿಲ್ 1, 2026 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದ್ದು, ಮದ್ಯದ ಬೆಲೆ ಏರಿಕೆಯಾಗಲಿದೆ.ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ದೊಡ್ಡ ರಿಯಾಯಿತಿ ಅಥವಾ ವಿಶೇಷ ಘೋಷಣೆಗಳನ್ನು ಮಾಡಿಲ್ಲ.ಕೃಷಿಯಿಂದ ಹಿಡಿದು ರಕ್ಷಣಾ ಕ್ಷೇತ್ರದವರೆಗೆ ಬಜೆಟ್ ಹಂಚಿಕೆಯಲ್ಲಿ ವಿಶೇಷ ಗಮನ ಹರಿಸಲಾಗಿದೆ. ವಿಕಸಿತ ಭಾರತ: 2047ರ ಹೊತ್ತಿಗೆ ‘ವಿಕಸಿತ ಭಾರತ’ದ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಈ ಬಜೆಟ್ ಅತ್ಯಂತ ಪ್ರಮುಖವಾಗಿದೆ. ಜಾಗತಿಕ ಅನಿಶ್ಚಿತತೆ ಮತ್ತು ಅಮೆರಿಕದ ಹೆಚ್ಚಿನ ಸುಂಕದ ಸವಾಲುಗಳ ನಡುವೆ ಈ ಬಜೆಟ್ ಮಂಡಿಸಲಾಗಿದೆ.
ಆದರೆ, ಕೆಲವು ಆಮದು ವಸ್ತುಗಳ ಮೇಲಿನ ಸುಂಕವನ್ನು ಸರಿಪಡಿಸಿರುವುದರಿಂದ ಕೆಲವೊಂದು ವಸ್ತುಗಳು ದುಬಾರಿಯಾಗಲಿವೆ. ಬಜೆಟ್ ಭಾಷಣ ಮುಗಿದ ಒಂದು ಗಂಟೆಯ ಅಂತರದಲ್ಲಿ ಹೊರಬಿದ್ದಿರುವ ಮಾಹಿತಿ ಪ್ರಕಾರ, ಯಾವುದು ಅಗ್ಗ ಮತ್ತು ಯಾವುದು ದುಬಾರಿ ಎಂಬ ಪಟ್ಟಿ ಇಲ್ಲಿದೆ.
ಮೊಬೈಲ್ ಮತ್ತು ಚಾರ್ಜರ್ ಬೆಲೆ ಇಳಿಕೆ!:
ಸ್ಮಾರ್ಟ್ಫೋನ್ ಪ್ರಿಯರಿಗೆ ಇದು ಹಬ್ಬದ ಸುದ್ದಿ. ಮೊಬೈಲ್ ಫೋನ್ ತಯಾರಿಕೆಗೆ ಬಳಸುವ ಬಿಡಿಭಾಗಗಳು, ಪಿಸಿಬಿಎ (PCBA) ಮತ್ತು ಮೊಬೈಲ್ ಚಾರ್ಜರ್ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು (Customs Duty) ಕಡಿತಗೊಳಿಸಲಾಗಿದೆ. ಇದರಿಂದ ಆಪಲ್, ಸ್ಯಾಮ್ಸಂಗ್ ಸೇರಿದಂತೆ ಎಲ್ಲಾ ಬ್ರಾಂಡ್ಗಳ ಮೊಬೈಲ್ ಬೆಲೆ ಗಣನೀಯವಾಗಿ ಕಡಿಮೆ ಆಗಲಿದೆ.
ಕ್ಯಾನ್ಸರ್ ರೋಗಿಗಳಿಗೆ ಸಂಜೀವಿನಿ!:
ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ಕ್ಯಾನ್ಸರ್ ಮತ್ತು ಡಯಾಬಿಟಿಸ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಬಳಸುವ 17 ಬಗೆಯ ಜೀವ ರಕ್ಷಕ ಔಷಧಿಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಅಥವಾ ಇಳಿಕೆ ಮಾಡಲಾಗಿದೆ. ಇದರಿಂದ ದುಬಾರಿ ಔಷಧಿಗಳು ಮತ್ತು ಮೆಡಿಕಲ್ ಉಪಕರಣಗಳ ಬೆಲೆ ಕಡಿಮೆಯಾಗಿ ರೋಗಿಗಳಿಗೆ ನೆರವಾಗಲಿದೆ.
ವಿದೇಶಿ ಟ್ರಿಪ್ ಫುಲ್ ಚೀಪ್!:
ನೀವೇನಾದ್ರೂ ಫಾರಿನ್ ಟ್ರಿಪ್ ಹೋಗೋ ಪ್ಲಾನ್ ಮಾಡಿದ್ರೆ ಲಾಟರಿ ಹೊಡೆದಿದೆ. ವಿದೇಶಿ ಪ್ರವಾಸದ ಪ್ಯಾಕೇಜ್ಗಳ ಮೇಲೆ ವಿಧಿಸುತ್ತಿದ್ದ ಟಿಸಿಎಸ್ (TCS) ದರವನ್ನು 5% ರಿಂದ ಬರೋಬ್ಬರಿ 2% ಗೆ ಇಳಿಸಲಾಗಿದೆ. ಇದರಿಂದ ವಿದೇಶಿ ಪ್ರವಾಸ ಈಗ ಬಜೆಟ್ ಫ್ರೆಂಡ್ಲಿ ಆಗಲಿದೆ.
ಕ್ರೀಡಾಪಟುಗಳಿಗೆ ಮತ್ತು ಮೀನುಗಾರರಿಗೆ ಬಂಪರ್!:
ಕ್ರೀಡೆಗೆ ಉತ್ತೇಜನ ನೀಡಲು ಸ್ಪೋರ್ಟ್ಸ್ ಸಾಮಗ್ರಿಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಇನ್ನು ಮೀನುಗಾರರಿಗೆ ಅನುಕೂಲವಾಗಲು ಸೀಗಡಿ ಅಥವಾ ಚೆಮ್ಮೀನ್ (Shrimp) ಆಹಾರ ಮತ್ತು ಸಂಸ್ಕರಣೆಗೆ ಬಳಸುವ ವಸ್ತುಗಳ ಮೇಲಿನ ಸುಂಕವನ್ನ ಕಡಿತ ಮಾಡಲಾಗಿದೆ. ಚರ್ಮದ ವಸ್ತುಗಳು ಮತ್ತು ಪಾದರಕ್ಷೆಗಳ ಕಚ್ಚಾ ವಸ್ತುಗಳ ಮೇಲಿನ ಸುಂಕವನ್ನೂ ಇಳಿಸಲಾಗಿದೆ.
ಸೋಲಾರ್ ಮತ್ತು ಇವಿ ವಾಹನ:
ಪರಿಸರ ಸ್ನೇಹಿ ವಾಹನಗಳನ್ನ ಉತ್ತೇಜಿಸಲು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಗೆ ಬೇಕಾದ ಲಿಥಿಯಂ (Lithium) ಮತ್ತು ಇತರ ಕಚ್ಚಾ ವಸ್ತುಗಳ ಮೇಲಿನ ಸುಂಕ ವಿನಾಯಿತಿಯನ್ನ ಮುಂದುವರಿಸಲಾಗಿದೆ. ಸೋಲಾರ್ ಪ್ಯಾನಲ್ ತಯಾರಿಕೆಗೆ ಬಳಸುವ ಸೋಲಾರ್ ಗ್ಲಾಸ್ ಕಚ್ಚಾ ವಸ್ತುಗಳೂ ಅಗ್ಗವಾಗಿವೆ. ಮೈಕ್ರೋವೇವ್ ಓವನ್ನ ಬಿಡಿಭಾಗಗಳ ಮೇಲಿನ ಸುಂಕವನ್ನೂ ಇಳಿಸಲಾಗಿದೆ.
ಯಾವುದು ದುಬಾರಿ?
ಒಂದೆಡೆ ಇಳಿಕೆ ಇದ್ರೆ, ಇನ್ನೊಂದೆಡೆ ಏರಿಕೆ ಇರಲೇಬೇಕಲ್ವಾ? ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳ ಮಾಡಲಾಗಿದ್ದು, ಧೂಮಪಾನಿಗಳಿಗೆ ಬಿಸಿ ಮುಟ್ಟಿದೆ. ವಿದೇಶದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳು ಮತ್ತು ನಿರ್ದಿಷ್ಟ ಟೆಲಿಕಾಂ ಉಪಕರಣಗಳ ಮೇಲಿನ ಸುಂಕವನ್ನು ಏರಿಕೆ ಮಾಡಲಾಗಿದೆ. ಸ್ಥಳೀಯ ಉತ್ಪಾದನೆಗೆ ಒತ್ತು ನೀಡಲು ವಿದೇಶದಿಂದ ಬರುವ ಕೆಲವು ಸಿದ್ಧ ವಸ್ತುಗಳ ಮೇಲೆ (Finished Goods) ತೆರಿಗೆ ಬರೆ ಎಳೆಯಲಾಗಿದೆ.
ಚಿನ್ನ-ಬೆಳ್ಳಿ ಕಥೆ ಏನು?
ಬಜೆಟ್ ಭಾಷಣದ ಸಮಯದಲ್ಲಿ ಕಸ್ಟಮ್ಸ್ ಸುಂಕದ ಬಗ್ಗೆ ದೊಡ್ಡ ಘೋಷಣೆ ನಿರೀಕ್ಷಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಬಜೆಟ್ಗೂ ಮುನ್ನವೇ ಚಿನ್ನ ಮತ್ತು ಬೆಳ್ಳಿ ಬೆಲೆ ಭಾರೀ ಕುಸಿತ ಕಂಡಿದೆ. ಹೂಡಿಕೆದಾರರು ಬಜೆಟ್ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯಕ್ಕೆ ಚಿನ್ನದ ದರ ಇಳಿಯುತ್ತಿರುವ ಹಾದಿಯಲ್ಲಿದೆ.







