ಸಮಗ್ರ ನ್ಯೂಸ್: ಭಾರತೀಯ ರೈಲ್ವೆ ಇಲಾಖೆಯು ರೈಲು ಟಿಕೆಟ್ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾಡುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಿದೆ. ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚವನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ದರಗಳು 2025ರ ಡಿಸೆಂಬರ್ 26ರಿಂದ ಜಾರಿಗೆ ಬರಲಿವೆ.
ಸಾಮಾನ್ಯ ರೈಲುಗಳು: 215 ಕಿ.ಮೀ ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 1 ಪೈಸೆ ಏರಿಕೆ.
ಮೇಲ್/ಎಕ್ಸ್‌ಪ್ರೆಸ್ ರೈಲುಗಳು: ಎಸಿ ಮತ್ತು ನಾನ್-ಎಸಿ ಎರಡೂ ವಿಭಾಗಗಳಲ್ಲಿ ಪ್ರತಿ ಕಿ.ಮೀಗೆ 2 ಪೈಸೆ ಏರಿಕೆ.
ಯಾರಿಗೆ ವಿನಾಯಿತಿ?: 215 ಕಿ.ಮೀ ಒಳಗಿನ ಪ್ರಯಾಣಿಕರಿಗೆ, ಉಪನಗರ (Suburban) ರೈಲುಗಳಿಗೆ ಮತ್ತು ಮಾಸಿಕ ಸೀಸನ್ ಪಾಸ್ (MST) ಹೊಂದಿರುವವರಿಗೆ ಯಾವುದೇ ದರ ಏರಿಕೆ ಇರುವುದಿಲ್ಲ
ಅಧಿಕಾರಿಗಳ ಪ್ರಕಾರ, ಈ ಏರಿಕೆಯು ಸಾಮಾನ್ಯ ಜನರ ಮೇಲೆ ದೊಡ್ಡ ಪರಿಣಾಮ ಬೀರದು.500 ಕಿ.ಮೀ ಪ್ರಯಾಣ ನಾನ್-ಎಸಿ ಮೇಲ್ ರೈಲಿನಲ್ಲಿ ಸುಮಾರು 10 ರೂ. ಹೆಚ್ಚಳವಾಗಲಿದೆ.1000 ಕಿ.ಮೀ ಪ್ರಯಾಣ ಸಂಪೂರ್ಣ ಕ್ರಾಂತಿ, ವಂದೇ ಭಾರತ್ ಅಥವಾ ರಾಜಧಾನಿ ಎಕ್ಸ್‌ಪ್ರೆಸ್‌ನಂತಹ ರೈಲುಗಳಲ್ಲಿ ಸುಮಾರು 20 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ.
ರೈಲ್ವೆ ಇಲಾಖೆಯ ನಿರ್ವಹಣಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. 2024-25ರಲ್ಲಿ ಒಟ್ಟು ನಿರ್ವಹಣಾ ವೆಚ್ಚ 2.63 ಲಕ್ಷ ಕೋಟಿ ರೂ. ತಲುಪಿದೆ. ಇದರಲ್ಲಿ ಮಾನವ ಸಂಪನ್ಮೂಲಕ್ಕೆ 1.15 ಲಕ್ಷ ಕೋಟಿ ರೂ. ಮತ್ತು ಪಿಂಚಣಿಗಾಗಿ 60,000 ಕೋಟಿ ರೂ. ವ್ಯಯವಾಗುತ್ತಿದೆ. ಈ ಆರ್ಥಿಕ ಹೊರೆಯನ್ನು ತಗ್ಗಿಸಲು ದರ ಪರಿಷ್ಕರಣೆ ಅನಿವಾರ್ಯ ಎಂದು ಇಲಾಖೆ ಸಮರ್ಥಿಸಿಕೊಂಡಿದೆ.2025ರ ಜುಲೈನಲ್ಲಿ ಮಾಡಲಾಗಿದ್ದ ದರ ಏರಿಕೆಯಿಂದ ರೈಲ್ವೆಗೆ 700 ಕೋಟಿ ರೂ. ಹೆಚ್ಚುವರಿ ಆದಾಯ ಬಂದಿತ್ತು.
ಇದೀಗ ಡಿಸೆಂಬರ್‌ನಿಂದ ಜಾರಿಯಾಗುವ ಹೊಸ ದರದಿಂದ 2026ರ ಮಾರ್ಚ್ 31ರೊಳಗೆ ಸುಮಾರು 600 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ರೈಲ್ವೆ ಸಚಿವಾಲಯ ಹೊಂದಿದೆ.ಒಟ್ಟಾರೆಯಾಗಿ, ಒಂದು ವರ್ಷದ ಅವಧಿಯಲ್ಲಿ ರೈಲ್ವೆ ಇಲಾಖೆಯು ಎರಡನೇ ಬಾರಿಗೆ ದರ ಏರಿಕೆ ಮಾಡಿದ್ದು, ದೂರದ ಪ್ರಯಾಣ ಮಾಡುವವರಿಗೆ ತುಸು ದುಬಾರಿಯಾಗಲಿದೆ.







