ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸಂಬಂಧಿತ ವ್ಯಕ್ತಿಗಳ ಚಟುವಟಿಕೆ, ಹಣಕಾಸಿನ ಮೂಲ, ಸಂಚಲನ ಮತ್ತು ಸಂಪರ್ಕ ವಲಯಗಳ ಕುರಿತು ಸಮಗ್ರ ತನಿಖೆ ನಡೆಸಲು ಕೇಳಿ ಸಲ್ಲಿಸಲಾದ ದೂರಿನ ಬಗ್ಗೆ ಇದುವರೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ಎಂಬಂತೆ ಕಾಣುವ ಸಂಘಟಿತ ಷಡ್ಯಂತ್ರದ ಹಿನ್ನೆಲೆಯಲ್ಲಿ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್, ಎಂ.ಡಿ. ಸಮೀರ್ ಸೇರಿದಂತೆ ಇನ್ನಿತರರ ಸಂಚಲನ, ಚಟುವಟಿಕೆಗಳು, ಹಣದ ಮೂಲ ಹಾಗೂ ಸಂಪರ್ಕ ಜಾಲಗಳ ಕುರಿತು ಸಂಪೂರ್ಣ ತನಿಖೆ ನಡೆಸಬೇಕು ಎಂಬ ಮನವಿಯೊಂದಿಗೆ ದೂರು ದಾಖಲಿಸಲಾಯಿತು.
ಈ ದೂರನ್ನು ಧರ್ಮಸ್ಥಳದ ಭಕ್ತರಾದ-ಬೆಂಗಳೂರು ನಿವಾಸಿ ತೇಜಸ್ ಎ. ಗೌಡ, ಬೆಳ್ತಂಗಡಿ ತಾಲ್ಲೂಕಿನ ಉಜಿರೆ ನಿವಾಸಿ ಭಾಸ್ಕರ್ ಬಡೆಕೊಟ್ಟು, ಧರ್ಮಸ್ಥಳದ ನಿವಾಸಿಗಳಾದ ಸುರೇಂದ್ರ ಪ್ರಭು ಮತ್ತು ಧನಕೀರ್ತಿ ಅರಿಗ ಹೈಕೋರ್ಟ್‌ಗೆ ಸಲ್ಲಿಸಿದ್ದರು. ಇದೀಗ ಈ ಅರ್ಜಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠವು ಪ್ರಕರಣದಲ್ಲಿ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಮುಂದೂಡಿದೆ.
ಇನ್ನು ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ u/s 215 ವರದಿಯನ್ನು ನೀಡುವಂತೆ ಜಯಂತ್ ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು, ಕೆಲವೊಂದು ವರದಿಯ ಪ್ರತಿಯನ್ನು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐ ಟಿ ಅಧಿಕಾರಿಗಳು ಸುಮಾರು 3,923 ಪುಟಗಳ ದಾಖಲೆಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇದರ ಬೆನ್ನಲ್ಲೇ ಜಯಂತ್ ಟಿ ದಾಖಲೆಯ ಪ್ರತಿಯನ್ನು ಸಲ್ಲಿಸುವಂತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದೀಗ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು 3,923 ಪುಟಗಳ ದಾಖಲೆಗಳಲ್ಲಿ ಕೆಲವೊಂದು ವರದಿಯ ಪ್ರತಿಗಳನ್ನು ನೀಡಲು ಸಮ್ಮತಿಸಿರುವುದಾಗಿ ಜಯಂತ್ ಟಿ ಪರವಾಗಿ ವಾದ ಮಂಡಿಸಿದ್ದ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆರಾಜು ಮಾಹಿತಿ ನೀಡಿದ್ದಾರೆ.







