ಸಮಗ್ರ ನ್ಯೂಸ್: ನೇಪಾಳ ಅಧ್ಯಕ್ಷರ ಕಚೇರಿಯು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ದೇಶದ ಮಧ್ಯಂತರ ಪ್ರಧಾನಿಯನ್ನಾಗಿ ಶುಕ್ರವಾರ ರಾತ್ರಿ ಘೋಷಿಸುವ ಮೂಲಕ ಹಲವು ದಿನಗಳ ಊಹಾಪೋಹಗಳಿಗೆ ಅಂತ್ಯ ಹಾಡಿದೆ.
ಜೆನ್-ಝಡ್ ಪ್ರತಿಭನಾಕಾರರು, ಅಧ್ಯಕ್ಷ ರಾಮಚಂದ್ರ ಪೌದಲ್ ಮತ್ತು ಸೇನಾ ಮುಖ್ಯಸ್ಥ ಅಶೋಕ ರಾಜ್ ಸಿಗ್ದೇಲ್ ಅವರ ನಡುವೆ ಸಹಮತ ಮೂಡಿದ ಬಳಿಕ ಕರ್ಕಿಯವರನ್ನು ಪ್ರಧಾನಿಯಾಗಿ ನೇಮಕಗೊಳಿಸುವ ನಿರ್ಧಾರ ಹೊರಬಿದ್ದಿದೆ.
ಕರ್ಕಿ ನೇಪಾಳದ ಮೊದಲ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದು, ಉಸ್ತುವಾರಿ ಸರಕಾರದಲ್ಲಿ ಸಣ್ಣ ಸಂಪುಟವನ್ನು ಹೊಂದಿರಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಕರ್ಕಿ ಶುಕ್ರವಾರ ರಾತ್ರಿಯೇ ಪ್ರಮಾಣ ವಚನ ಸ್ವೀಕರಿಸಲಿದ್ದು, ಅದರ ಬೆನ್ನಲ್ಲೇ ಸಂಪುಟದ ಮೊದಲ ಸಭೆ ನಡೆಯಲಿದೆ ಎಂದೂ ಮೂಲಗಳು ಹೇಳಿವೆ. ಫೆಡರಲ್ ಸಂಸತ್ತಿನ ಜೊತೆಗೆ ಎಲ್ಲ ಏಳೂ ಪ್ರಾಂತೀಯ ಸಂಸತ್ತುಗಳ ವಿಸರ್ಜನೆಗೆ ಸಂಪುಟವು ಶಿಫಾರಸು ಮಾಡುವ ಸಾಧ್ಯತೆಯಿದೆ.







