ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ 39 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಪದ್ಮಲತಾ ಅವರ ಕಳೇಬರವನ್ನು ಹೊರತೆಗೆದು ಮರು ತನಿಖೆ ಮಾಡಿ, ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಕೋರಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪದ್ಮಲತಾ ಅವರ ಅಕ್ಕ ಇಂದ್ರಾವತಿ ದೂರು ನೀಡಿದ್ದಾರೆ. ಸೋಮವಾರ (ಆ.11) ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿದ ಇಂದ್ರಾವತಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
“ನಾನು ಪ್ರಸ್ತುತ ನೆಲ್ಯಾಡಿ ನಿವಾಸಿಯಾಗಿದ್ದು, ದಿವಂಗತ ದೇವಾನಂದ ಅವರ ಮಗಳು. ಕೊಲೆಗೀಡಾದ ಪದ್ಮಲತಾಳ ಅಕ್ಕನಾಗಿರುತ್ತೇನೆ. 38 ವರ್ಷಗಳ ಹಿಂದೆ ಎಸ್‌ಡಿಎಂ ಕಾಲೇಜು ಉಜಿರೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ನನ್ನ ತಂಗಿ ಪದ್ಮಲತಾ ದಿನಾಂಕ 22.12.1986ರಂದು ಉಜಿರೆ ಕಾಲೇಜಿಗೆ ಹೋದವಳು ಸಂಜೆ ಧರ್ಮಸ್ಥಳ ತನಕ ಬಂದು ಕಾಣೆಯಾಗಿರುತ್ತಾಳೆ. ಆಕೆಯ ಮೃತದೇಹ ದಿನಾಂಕ 17.02.1987 ರಂದು ನೆರಿಯ ಹೊಳೆಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಮ್ಮ ತಂದೆ ಮನೆಯು ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ಇತ್ತು” ಎಂದು ವಿವರಿಸಿದ್ದಾರೆ.
ಮುಂದುವರಿದು, “ನನ್ನ ತಂಗಿ ಅಪಹರಣ, ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಕಾರಣ, ಆಕೆಯ ಅಸಹಜ ಸಾವಿಗೆ ಕಾರಣರಾದ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಆಗ್ರಹಿಸಿ ಸಿಪಿಐಎಂ ಮುಖಂಡರೂ ಆಗಿದ್ದ ನನ್ನ ತಂದೆ ದಿವಂಗತ ದೇವಾನಂದ ಅವರು ಸಿಪಿಐಎಂ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ರೂಪಿಸಿದ್ದರು. ಹೋರಾಟಕ್ಕೆ ಮಣಿದ ಸರ್ಕಾರ ಕೊನೆಗೆ ಪ್ರಕರಣದ ತನಿಖೆ ನಡೆಸಲು ಸಿಓಡಿ ತನಿಖೆಗೆ ಆದೇಶಿಸಿತು. ವಿಧಾನ ಸಭೆಯಲ್ಲಿ ಚರ್ಚೆ ಆಗಿರುವುದು ಕೂಡಾ ವಿಧಾನಸಭಾ ದಾಖಲೆಯಲ್ಲಿ ಇರಬೇಕು. ಅಂದು ಸಚಿವರಾಗಿದ್ದ ರಾಚಯ್ಯ ಅವರೂ ಧರ್ಮಸ್ಥಳ ಗ್ರಾಮದ ಬೊಳಿಯಾರಲ್ಲಿರುವ ನಮ್ಮ ಮನೆಗೆ ಬಂದು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ಕೊನೆಗೆ ತನಿಖೆಯು ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ನಮಗೆ ನ್ಯಾಯ ಸಿಗದಂತಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಅದು ಒಂದು ಯೋಜಿತ ಅಪಹರಣ, ಅತ್ಯಾಚಾರ, ಕೊಲೆ ಎಂಬ ನಮ್ಮ ಅನುಮಾನದಂತೆ ಮುಂದೆಯಾದರೂ ತನಿಖೆ ನಡೆಸಿ ನ್ಯಾಯ ಪಡೆಯಬೇಕೆಂದು ನನ್ನ ತಂಗಿಯ ಕಳೆಬರಹವನ್ನು ದಹನ ಮಾಡದೆ ಹೂತಿಟ್ಟಿದ್ದೇವೆ. ಅದನ್ನು ತೆಗೆದು ತನಿಖೆ ನಡೆಸಿದರೆ ಕೊಲೆಯಾದ ಖಚಿತತೆ ಸಿಗಲಿದೆ ಹಾಗೂ ನನಗೆ ತಿಳಿದ ಸಾಕ್ಷಿನುಡಿಯಲು ನಾನು ಸಿದ್ಧಳಿದ್ದೇನೆ. ಆದ್ದರಿಂದ ನನ್ನ ತಂಗಿಯ ಪ್ರಕರಣವನ್ನು ರೀ-ಓಪನ್ ಮಾಡಿ, ಹೂತಿಟ್ಟ ಕಳೆಬರವನ್ನು ತೆಗೆದು ತನಿಖೆ ನಡೆಸಿ ತಂಗಿಯ ಸಾವಿಗೆ ನ್ಯಾಯ ಒದಗಿಸಬೇಕಾಗಿ ಹಾಗೂ ಅಪರಾಧಿಗಳ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಮಾಡುತ್ತೇನೆ” ಎಂದಿದ್ದಾರೆ.







