ಸಮಗ್ರ ನ್ಯೂಸ್: ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ಒಎನ್ಡಿಸಿ (ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಮೂಲಕ ಐದು ಆ್ಯಪ್ಗಳಲ್ಲಿ ನಮ್ಮ ಮೆಟ್ರೋದ ಟಿಕೆಟ್ ಸೌಕರ್ಯ ಕಲ್ಪಿಸಲಿದೆ.
ಮೆಟ್ರೋ ಪ್ರಯಾಣಿಕರು ಸುಲಭವಾಗಿ ಟಿಕೆಟ್ ಖರೀದಿಸಲು ಮೆಟ್ರೋ ಟಿಕೆಟ್ ಅನ್ನು ಮೈಲ್ಸ್ ಆ್ಯಂಡ್ ಕಿಲೋಮೀಟರ್ ಟುಮ್ಯಾಕೋ, ರೆಡ್ ಬಸ್, ಔಟ್ ಪಾಥ್, ಹೈವೇ ಡಿಲೈಟ್ ಸೇರಿ ಒಟ್ಟು ಐದು ಆ್ಯಪ್ಗಳ ಮೂಲಕ ಖರೀದಿಸಬಹುದಾಗಿದೆ. ಈ ಆ್ಯಪ್ಗಳು ಮೆಟ್ರೋ ಟಿಕೆಟ್ ಬುಕ್ ಮಾಡಿದರೆ, ಶೇ 20-30 ರಷ್ಟು ರಿಯಾಯಿತಿ ಕೂಡ ನೀಡುತ್ತಿವೆ.
ಪ್ರಸ್ತುತ ನಮ್ಮ ಮೆಟ್ರೋ, ವಾಟ್ಸ್ಆ್ಯಪ್ ಚಾಟ್ ಬಾಟ್ ಹಾಗೂ ಪೇಟಿಎಂನಲ್ಲಿ ಮಾತ್ರ ಮೆಟ್ರೋ ಟಿಕೆಟ್ ಖರೀದಿಗೆ ಅವಕಾಶವಿತ್ತು. ಟಿಕೆಟ್ಗಾಗಿ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸರದಿ ನಿಲ್ಲುವುದನ್ನು ತಪ್ಪಿಸಲು ಬಿಎಂಆರ್ಸಿಎಲ್ ಈ ಕ್ರಮ ಕೈಗೊಂಡಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
ಇತ್ತೀಚೆಗೆ ನಿಗಮವು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಸ್ವಯಂ ಸೇವಾ ಟಿಕೆಟ್ ನೀಡುವ ಯಂತ್ರಗಳನ್ನು ಅಳವಡಿಸಿತ್ತು. ಇವು 30 ಸೆಕೆಂಡುಗಳಲ್ಲಿ ಟಿಕೆಟ್ಗಳನ್ನು ಒದಗಿಸುತ್ತವೆ. ಈ ಮೂಲಕ ಪ್ರಯಾಣಿಕರ ದಟ್ಟಣೆ ವೇಳೆಯಲ್ಲಿ ಟಿಕೆಟ್ಗೆ ಉಂಟಾಗುವ ನೂಕುನುಗ್ಗಲು ತಡೆಗೆ ಬಿಎಂಆರ್ಸಿಎಲ್ ಕ್ರಮ ವಹಿಸಿದೆ.







