ಸಮಗ್ರ ನ್ಯೂಸ್: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಭಾರೀ ಮಳೆಗೆ ಮತ್ತೆ ಗುಡ್ಡ ಕುಸಿದಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಣ್ಣು ಹಾಗೂ ಮರಗಳು ರಸ್ತೆಗೆ ಉರುಳಿಬಿದ್ದ ಪರಿಣಾಮ, ನೂರಾರು ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಯಾವುದೇ ವೈಜ್ಞಾನಿಕ ಕ್ರಮ ಅಥವಾ ಮುನ್ನೆಚ್ಚರಿಕೆಗಳನ್ನು ಅನುಸರಿಸದೆ ಗುಡ್ಡವನ್ನು ಕಡಿದಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮಳೆಗಾಲ ಆರಂಭವಾದಾಗಿನಿಂದ ಮಣ್ಣು ಸಡಿಲಗೊಂಡು ಪದೇ ಪದೇ ಕುಸಿಯುತ್ತಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನೆಯಿಂದಾಗಿ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ. ಭಾರೀ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಕೆಲವು ಸಣ್ಣ ವಾಹನಗಳು ಮಾತ್ರ ಕಿರಿದಾದ ಜಾಗದಲ್ಲಿ ಅಪಾಯಕಾರಿಯಾಗಿ ಸಾಗುತ್ತಿರುವುದು ಕಂಡುಬಂತು. ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಯಂತ್ರೋಪಕರಣಗಳ ಸಹಾಯದಿಂದ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮುಂದುವರಿದಂತೆ ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ ಮಾರೇನಹಳ್ಳಿ ಬಳಿಯೂ ಭೂಕುಸಿತ ಉಂಟಾಗಿರುವುದರಿಂದ ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಬದಲಿ ಮಾರ್ಗ: ಬೆಂಗಳೂರಿನಿಂದ ಮಂಗಳೂರಿಗೆ: ಹಾಸನದಿಂದ ಬೇಲೂರು ಮಾರ್ಗವಾಗಿ ಚಾರ್ಮಾಡಿ ಘಾಟ್ ಮೂಲಕ ಸಂಚರಿಸುವುದು.
• ಮಂಗಳೂರಿನಿಂದ ಬೆಂಗಳೂರಿಗೆ: ಸಂಪಾಜೆ ಅಥವಾ ಚಾರ್ಮಾಡಿ ಘಾಟ್ ಮಾರ್ಗವನ್ನು ಬಳಸಿಕೊಂಡು ಸಂಚರಿಸುವುದು.







