ಕೊನೆಗೂ ಕಳಕೊಂಡ ಚೋಕರ್ಸ್ ಪಟ್ಟ| ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಸ್ ಗೆ ಮುತ್ತಿಟ್ಟ ದ.ಆಫ್ರಿಕಾ

ಸಮಗ್ರ ನ್ಯೂಸ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025 ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಚೊಚ್ಚಲ ಟ್ರೋಫಿ ತನ್ನದಾಗಿಸಿಕೊಳ್ಳುವ ಹೊಸ ದಾಖಲೆಯನ್ನೇ ಸೃಷ್ಟಿಸಿದೆ

Ad Widget ... ..

ಕ್ರಿಕೆಟ್ ತವರು ಲಾರ್ಡ್ಸ್ ಕ್ರಿಕೆಟ್​ ಮೈದಾನದಲ್ಲಿ ಚಾಂಪಿಯನ್‌ಶಿಪ್ 2025ರ ಫೈನಲ್‌ ಪಂದ್ಯದಲ್ಲಿ ಆಸಿಸ್‌ ತಂಡವನ್ನು ಮಣಿಸುವ ಮೂಲಕ ದಕ್ಷಿಣ ಆಫ್ರಿಕಾ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಹೊಸ ಚರಿತ್ರೆಯನ್ನೇ ಸೃಷ್ಟಿಸಿದ್ದು, ಇದರಿಂದ ಬರೀ ದಕ್ಷಿಣ ಆಫ್ರಿಕಾ ಅಷ್ಟೇ ಅಲ್ಲದೆ, ವಿದೇಶಗಳಲ್ಲೂ ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

Ad Widget

ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟಿಂಗಿಳಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 212 ರನ್​ಗಳಿಗೆ ಆಲೌಟ್​ ಆಗಿತ್ತು. ಬಳಿಕ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟ್‌ ಬೀಸಿದ್ದ ದಕ್ಷಿಣ ಆಫ್ರಿಕಾ ತಂಡ ಕಳಪೆ ಪ್ರದರ್ಶನ ತೋರುವ ಮೂಲಕ ಕೇವಲ 138 ರನ್​ಗೆ ಆಲೌಟ್ ಆಗಿತ್ತು. ಆದರೆ, ಬೌಲಿಂಗ್​ನಲ್ಲಿ ರಬಾಡ ಮಾರಕ ದಾಳಿಗೆ ಆಸ್ಟ್ರೇಲಿಯಾ ಬ್ಯಾಟರ್‌ಗಳು ನಡುಗುಬಿಟ್ಟರು. ಅಷ್ಟರ ಮಟ್ಟಿಗೆ ಬೌಲಿಂಗ್‌ ದಾಳಿ ನಡೆಸಿದರು.

ಮೊದಲ ಹಾಗೂ ಎರಡನೇ ಇನ್ನಿಂಗ್ಸ್​ ಎರಡರಲ್ಲೂ ಕಗಿಸೋ ರಬಾಡ ಬೌಲಿಂಗ್​ ಆಸೀಸ್​ ಬ್ಯಾಟರ್​​ಗಳಿಗೆ ಸಂಕಷ್ಟ ತಂದಿಟ್ಟಿತ್ತು. ಇದರಿಂದ ಪೇಸ್​ ಬೌಲರ್​ ಮಿಚೆಲ್ ಸ್ಟಾರ್ಕ್​​ ಹಾಫ್ ​ಸೆಂಚುರಿ ಬಿಟ್ಟರೇ ಉಳಿದವರು ಹೇಳಿಕೊಳ್ಳುವಷ್ಟು ಬ್ಯಾಟಿಂಗ್ ಪ್ರದರ್ಶನ ತೋರಲಿಲ್ಲ. ಈ ಮೂಲಕ 2ನೇ ಇನ್ನಿಂಗ್ಸ್​ನಲ್ಲಿ ಆಸೀಸ್​ 207 ರನ್​ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಒಪ್ಪಿಸಿಬಿಟ್ಟಿತು.

ಶುಕ್ರವಾರ ಕೇವಲ ಎರಡು ವಿಕೆಟ್​ ಕಳೆದುಕೊಂಡು 213 ರನ್​ ಕಲೆಹಾಕಿದ್ದ ದಕ್ಷಿಣ ಆಫ್ರಿಕಾ ಇಂದಿಗೆ ಬ್ಯಾಟಿಂಗ್​ ಕಾಯ್ದುಕೊಂಡಿತ್ತು. ಅದರಂತೆಯೇ ಬ್ಯಾಟಿಂಗ್ ಮುಂದುವರೆಸಿದ್ದ ಸೌತ್ ಆಫ್ರಿಕಾ ತಂಡ 66 ರನ್​ಗೆ ನಾಯಕ ಟೆಂಬಾ ಬವುಮಾ ಔಟ್ ಆದರು. ಐಡೆನ್ ಮಾರ್ಕ್ರಾಮ್​ ಈ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಒಟ್ಟು 207 ಎಸೆತಗಳನ್ನು ಎದುರಿಸಿದ್ದು, 14 ಬೌಂಡರಿಗಳ ಸಹಿತ 136ರನ್​ ಬಾರಿಸಿದರು.

ಐಡೆನ್ ಮಾರ್ಕ್ರಾಮ್ ಗೆಲುವಿಗೆ ಇನ್ನು 5 ರನ್​ ಬೇಕಾಗಿದ್ದಾಗಲೇ ಟ್ರಾವಿಸ್​ ಹೆಡ್​ಗೆ ಕ್ಯಾಚ್​ ಕೊಟ್ಟು ಪೆವಿಲಿಯನ್‌ನತ್ತ ತೆರಳಿದ್ದು, ನಂತರ ಬಂದ ಬ್ಯಾಟರ್​ಗಳು ತಂಡವನ್ನು ಗೆಲ್ಲಿಸಿಬಿಟ್ಟರು. ತಂಡ ಗೆಲುವಿಗೆ ಐಡೆನ್ ಮಾರ್ಕ್ರಾಮ್ ಅವರ ಬ್ಯಾಟ್‌ನಿಂದ ಮೂಡಿಬಂದ ಬೃಹತ್‌ ರನ್‌ಗಳು ಅಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಸ್ಫೋಟಕ ಬ್ಯಾಟಿಂಗ್‌ ಆಡುವ ಮೂಲಕ ಆಸಿಸ್‌ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಮತ್ತೊಂದೆಡೆ, ಆಫ್ರಿಕಾ ಪರ ಎರಡೂ ಇನ್ನಿಂಗ್ಸ್​​ನಲ್ಲೂ ಕಗಿಸೋ ರಬಾಡ ಒಟ್ಟು 9 ವಿಕೆಟ್​ ಕೆಡವಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಒಟ್ಟು 282 ರನ್​ಗಳ ಟಾರ್ಗೆಟ್ ಹೊಂದಿದ್ದ ದಕ್ಷಿಣ ಆಫ್ರಿಕಾ ಟೆಸ್ಟ್​ನ 4ನೇ ದಿನದಲ್ಲಿ ಭರ್ಜರಿ ಗೆಲುವು ಸಾಧಿಸಿ ಇತಿಹಾಸವನ್ನೇ ಸೃಷ್ಟಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಪ್ರಥಮ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ ಆಗಿದೆ.

Leave a Comment

Your email address will not be published. Required fields are marked *