ಶಕ್ತಿ ಯೋಜನೆ: ಎರಡು ವರ್ಷದಲ್ಲಿ 7 ಕೋಟಿ 41 ಲಕ್ಷ ಮಹಿಳೆಯರ ಉಚಿತ ಪ್ರಯಾಣ

ಸಮಗ್ರ ನ್ಯೂಸ್‌: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಯಾಗಿ 2 ವರ್ಷ ಸಂದಿದ್ದು, 7 ಕೋಟಿ 41 ಲಕ್ಷ ಮಹಿಳೆಯರು ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ. 2023ರ ಜೂನ್ 11 ರಿಂದ 2025ರ ಜೂನ್ 11ರವರೆಗೆ ಅಂದರೆ ಎರಡು ವರ್ಷಗಳಲ್ಲಿ 7,41,90,451 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಟಿಕೆಟ್ ಮೌಲ್ಯ 206 ಕೋಟಿ ರುಪಾಯಿಗಳಾಗಿದೆ. 2023ರ ಜೂನ್ 11 ರಿಂದ 2024ರ ಜುಲೈ 31ರವರೆಗೆ ಅಂದರೆ ಒಂದು ವರ್ಷ 2 ತಿಂಗಳಲ್ಲಿ 4,40,24,935 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಟಿಕೆಟ್ ಮೌಲ್ಯ 117 ಕೋಟಿ 19 ಲಕ್ಷ ರುಪಾಯಿಗಳಾಗಿತ್ತು. ಹೀಗೆ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ವೆಚ್ಚವನ್ನು ನಿಗಮಗಳಿಗೆ ರಾಜ್ಯ ಸರ್ಕಾರ ಭರಿಸುತ್ತಾ ಬಂದಿದ್ದು, ಸಾರಿಗೆ ಸಂಸ್ಥೆಗೆ ಕೋಟ್ಯಂತರ ರುಪಾಯಿ ಆದಾಯವೂ ಬಂದಿದೆ.

Ad Widget . Ad Widget . Ad Widget .

ಸಾರಿಗೆ ಸಂಸ್ಥೆಯ ಬೆಂಗಳೂರು ದಕ್ಷಿಣ ವಿಭಾಗಕ್ಕೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಸೇರಿ ಒಟ್ಟು 6 ಡಿಪೋ (ಘಟಕ)ಗಳಿವೆ. ಪ್ರತಿ ನಿತ್ಯ 435ಕ್ಕೂ ಹೆಚ್ಚು ಮಾರ್ಗಗಳಲ್ಲಿ 2,090 ಸಾಮಾನ್ಯ, 666 ವೇಗಧೂತ, 155 ನಗರ ಸಾರಿಗೆ ಹಾಗೂ 257 ನಾನ್ ಸ್ಟಾಪ್ ಸೇರಿ ಒಟ್ಟು 3168 ಬಸ್‌ಗಳು ಸಂಚಾರ ಮಾಡುತ್ತಿದ್ದು, ಟ್ರಿಪ್ ಗಳನ್ನೂ ಹೆಚ್ಚಿಸಲಾಗಿದೆ. ಯೋಜನೆ ಆರಂಭಕ್ಕೂ ಹಿಂದೆ ಕಡಿಮೆಯಿದ್ದ ಮಹಿಳಾ ಪ್ರಯಾಣಿಕರ ಸಂಖ್ಯೆ, ಯೋಜನೆ ನಂತರ ಪುರುಷ ಪ್ರಯಾಣಿಕರಿಗಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

Ad Widget . Ad Widget .

ರಾಜಧಾನಿ ಬೆಂಗಳೂರು, ಕೆಂಗೇರಿ, ಚನ್ನಪಟ್ಟಣ, ಮದ್ದೂರು, ಮಂಡ್ಯ ಸೇರಿದಂತೆ ಪ್ರತಿನಿತ್ಯ ಕೆಲಸ-ಕಾರ್ಯಗಳಿಗೆ ತೆರಳಲು ರೈಲು, ಖಾಸಗಿ ಬಸ್, ಆಟೋ ಸೇರಿದಂತೆ ಇನ್ನಿತರ ವಾಹನಗಳನ್ನು ಅವಲಂಬಿಸುತ್ತಿದ್ದ ಸಾವಿರಾರು ಮಹಿಳೆಯರು ಸಾರಿಗೆ ಬಸ್ ಗಳನ್ನೇ ಅವಲಂಬಿಸಿದ್ದಾರೆ. ಗ್ರಾಮೀಣ ಸಾರಿಗೆ ಜತೆಗೆ ಎಕ್ಸ್‌ಪ್ರೆಸ್‌ಗಳಲ್ಲಿಯೂ ಮಹಿಳಾ ಪ್ರಯಾಣಿಕರ ಸಂಖ್ಯೆ ಮೂರುಪಟ್ಟು ಹೆಚ್ಚಿದೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಈ ಮೊದಲು ಪ್ರಯಾಣಿಕರು ಇಲ್ಲದೆ ಖಾಲಿ ಸಂಚರಿಸುತ್ತಿದ್ದ ಬಸ್‌ಗಳಲ್ಲೂ ಈಗ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ.

Leave a Comment

Your email address will not be published. Required fields are marked *