ನವದೆಹಲಿ: ಅಫ್ಘಾನಿಸ್ತಾನದ ಯುವಕ ಹಾಗೂ ಫ್ರಾನ್ಸ್ನ ಯುವತಿ ನಡುವೆ ಭಾರತದಲ್ಲಿ ಪ್ರೀತಿ ಚಿಗುರಿ ಕೊನೆಗೆ ಇಲ್ಲಿಯೇ ಹೈಕೋರ್ಟ್ನಿಂದ ಇವರ ಲವ್ ಸ್ಟೋರಿ ಸುಖಾಂತ್ಯಗೊಂಡಿರುವ ಘಟನೆ ನಡೆದಿದೆ.
ಇವರಿಬ್ಬರೂ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಇಬ್ಬರು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಮಾತಿಗೆ ಮಾತು ಬೆಳೆದು, ಸಲುಗೆಯಾಗಿ, ಅದು ಪ್ರೀತಿಗೆ ತಿರುಗಿ ಮದುವೆಯವರೆಗೂ ಬಂದಿದ್ದಾರೆ. ನಂತರ ದೆಹಲಿಯ ಮಸೀದಿಯೊಂದರಲ್ಲಿ ವಿವಾಹವಾಗಿದ್ದರು.
ಆದರ ದುರದೃಷ್ಟವಶಾತ್ ಇವರು ವಾಪಸ್ ಹೋಗಲು ಆಗಲಿಲ್ಲ. ಇದಕ್ಕೆ ಕಾನೂನು ಅಡಚಣೆ ಉಂಟಾಯಿತು. ಏಕೆಂದರೆ ಈ ವೇಳೆಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದ್ದು, ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ನೂತನ ಜೋಡಿ ಫ್ರಾನ್ಸ್ಗೆ ಹೋಗಲು ಬಯಸಿದರು.
ಆದರೆ ಅಫ್ಘಾನಿಸ್ತಾನ ಮೂಲದ ಪತ್ನಿಯ ವೀಸಾಕ್ಕಾಗಿ ಫ್ರೆಂಚ್ ರಾಯಭಾರ ಕಚೇರಿಗೆ ತೆರಳಿದಾಗ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡದೇ ವೀಸಾ ನೀಡಲು ಸಾಧ್ಯವಿಲ್ಲ ಎಂದು ಅದು ತಿಳಿಸಿತು.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮದುವೆಯಾಗಿರುವ ಕಾರಣ, ಈ ಜೋಡಿ ವಿವಾಹ ನೋಂದಣಿಗಾಗಿ ದೆಹಲಿ ಸರ್ಕಾರದ ವೆಬ್ಸೈಟ್ಗೆ ಮೊರೆ ಹೋಗಿದ್ದಾರೆ. ಅಲ್ಲೂ ಅದೃಷ್ಟ ಕೈಗೂಡಲಿಲ್ಲ. ಏಕೆಂದರೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ವೋಟಿಂಗ್ ಕಾರ್ಡ್ ಬೇಕು ಎಂದು ಅದರಲ್ಲಿ ಉಲ್ಲೇಖವಾಗಿತ್ತು. ಆದ್ದರಿಂದ ಜೋಡಿ ದೆಹಲಿಯ ಪ್ರಸಿದ್ಧ ವಕೀಲ ದಿವ್ಯಾಂಶು ಪಾಂಡೆ ಎಂಬ ವಕೀಲರನ್ನು ಭೇಟಿಯಾದರು.
ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಸಲಹೆ ನೀಡಿದರು. ನಂತರ ಅರ್ಜಿ ಸಲ್ಲಿಸಿದ ಅವರು ಸಂವಿಧಾನದ 14ನೇ ಪರಿಚ್ಛೇದ ಉಲ್ಲೇಖ ಮಾಡಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡುವಂತೆ ಕೋರಿದ್ದಾರೆ. ವಾದ ಆಲಿಸಿದ ಹೈಕೋರ್ಟ್ ಈ ಬಗ್ಗೆ ದೆಹಲಿ ಸರ್ಕಾರಕ್ಕೆ ನೋಟಿಸ್ ನೀಡುವ ಮೂಲಕ ಪ್ರತಿಕ್ರಿಯೆ ಕೇಳಿದೆ. ಇದಕ್ಕೆ ದೆಹಲಿ ಸರ್ಕಾರ ಸಮ್ಮಿತಿ ನೀಡಿದೆ. ಆದ್ದರಿಂದ ಇಬ್ಬರಿಗೂ ವಿಶೇಷ ವಿವಾಹ ಕಾಯ್ದೆಯಡಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಜೋಡಿಯ ಕಥೆ ಸುಖಾಂತ್ಯಗೊಂಡಿದ್ದು, ಮುಂದಿನ ತಿಂಗಳು ಇವರು ಫ್ರಾನ್ಸ್ಗೆ ತೆರಳಲಿದ್ದಾರೆ.
ಒಟ್ಟಾರೆ ಎರಡು ಧ್ರುವಗಳ ಪ್ರೀತಿಗೆ ಭಾರತ ನೆಲ ಸಾಕ್ಷಿಯಾಯಿತು. ಈ ಜೋಡಿಯ ಮುಂದಿನ ಬಾಳು ಸುಖವಾಗಿರಲಿ ಎಂದು ಹಾರೈಸೋಣ….