ಸಮಗ್ರ ನ್ಯೂಸ್: ಎಸ್ಪಿ ಕಚೇರಿ ಆವರಣದಲ್ಲೇ ಪತ್ನಿಯನ್ನು ಕೊಂದು ಪೊಲೀಸ್ ಕಾನ್ಸ್ ಟೇಬಲ್ ಕ್ರೌರ್ಯ ಮೆರೆದಿದ್ದಾನೆ. ಎಸ್ಪಿ ಕಚೇರಿ ಗೆ ಬಂದ ಪತ್ನಿಯನ್ನು ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಪೊಲೀಸ್ ಕಾನ್ಸ್ ಟೇಬಲ್ ಲೋಕನಾಥ್ ಪತ್ನಿ ಮಮತಾಗೆ ಚಾಕುವಿನಿಂದ ಇರಿದಾತ. ಈತ ಶಾಂತಿಗ್ರಾಮ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ, ಕಳೆದ ಕೆಲವು ದಿನಗಳಿಂದ ಗಂಡ ಹೆಂಡತಿ ಗಲಾಟೆ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಗಂಡನ ವಿರುದ್ಧ ದೂರು ನೀಡಲು ಪತ್ನಿ ಮಮತಾ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದರು. ಈ ವೇಳೆ ಗಂಡ ಲೋಕನಾಥ್ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಪತಿಯಿಂದ ಚಾಕು ಇರಿತಕ್ಕೆ ಒಳಗಾದ ಮಮತಾಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದ್ದಾಳೆ.
24 ವರ್ಷಗಳ ಪೊಲೀಸ್ ಇಲಾಖೆಯಲ್ಲಿರುವ ಅರಕಲಗೂಡು ಮೂಲದ ಲೋಕನಾಥ್ ಮತ್ತು ಹಾಸನ ಮೂಲದ ಮಮತಾ ಪ್ರೀತಿಸಿ ಮದುವೆಯಾಗಿ 19 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಮಗ ಪಿಯುಸಿ ಮತ್ತು ಮತ್ತೋರ್ವ 9ನೇ ತರಗತಿ ಓದುತ್ತಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.