ಸಮಗ್ರ ನ್ಯೂಸ್: ಮುಸ್ಲಿಂ ಸಹೋದ್ಯೋಗಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಶಿವಮೊಗ್ಗ ನಗರದ ಆರ್ಎಂಎಲ್ ನಗರದ ಸಮೀಪ ನಡೆದಿದೆ.
ಶಿವಮೊಗ್ಗದ ನಂದನ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದ್ದು ಈತ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಅನ್ಯ ಕೋಮಿನ ಸಹೋದ್ಯೋಗಿಯನ್ನು ಕೆಲಸದ ನಿಮಿತ್ತ ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ 20ಕ್ಕೂ ಹೆಚ್ಚು ಅನ್ಯ ಕೋಮಿನ ಯುವಕರು ನಂದನ್ನನ್ನು ತಡೆದು ಥಳಿಸಿದ್ದರು. ನಮ್ಮ ಸಮುದಾಯದ ಹುಡುಗಿಯನ್ನು ಯಾಕೆ ಬೈಕ್ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದೀಯಾ ಎಂದು ಹೇಳಿ ಯುವಕರ ಗುಂಪು ಥಳಿಸಿದೆ.
ಹಲ್ಲೆಯಿಂದ ನಂದನ್ ಕಣ್ಣು, ಕಿವಿ ಮತ್ತು ಬಾಯಿಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಿವಮೊಗ್ಗ ಶಾಸಕ ಎಸ್.ಎನ್ ಚನ್ನಬಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ನಂದನ್ ಆರೋಗ್ಯ ವಿಚಾರಿಸಿದರು. ನಂದನ್ಗೆ ಧೈರ್ಯ ಹೇಳಿ, ಸೂಕ್ತ ಕಾನೂನು ಕ್ರಮದ ಭರವಸೆ ನೀಡಿದರು.
ಇನ್ನೂ ಇದೇ ವಿಚಾರವಾಗಿ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕಾಂಗ್ರೆಸ್ ಆಡಳಿತವನ್ನು ಆಕ್ಷೇಪಿಸಿದ್ದಾರೆ. “ಕಾನೂನು ಸುವ್ಯವಸ್ಥೆಯನ್ನು ಮತೀಯ ಆಧಾರದ ಮೇಲೆ ನಿರ್ವಹಿಸುವ ಮೂಲಕ ಬಹುಸಂಖ್ಯಾತರನ್ನು ಕಾಂಗ್ರೆಸ್ ಅಭದ್ರತೆಯ ಸ್ಥಿತಿಗೆ ತಳ್ಳುತ್ತಿದೆ. ಸರ್ಕಾರದ ಆಡಳಿತ ತುಘಲಕ್ ನೀತಿಯನ್ನು ನೆನಪಿಸುತ್ತಿದೆ. ಅಮಾಯಕ ಹಿಂದೂ ಯುವಕನ ಮೇಲಿನ ಹಲ್ಲೆ ಘಟನೆಯು ಶಾಂತಿ ಸುವ್ಯವಸ್ಥೆ ಕದಡುವ ಸ್ಥಿತಿಗೆ ಕಾರಣವಾಗದಂತೆ ಪೋಲಿಸರು ಕಾರ್ಯೋನ್ಮುಖರಾಗಿ ನಂದನ್ ಮೇಲೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸುವೆ” ಎಂದು ಎಕ್ಸ್ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.