ಸಮಗ್ರ ನ್ಯೂಸ್: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ 2024ರ ಟಿ20 ವಿಶ್ವಕಪ್ ಬಳಿಕ ಕೊನೆಗೊಳ್ಳಲಿದ್ದು, ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರು ಮುಖ್ಯ ಕೋಚ್ ಹುದ್ದೆಗೇರಬಹುದು ಎಂದು ಹೇಳಲಾಗುತ್ತಿದೆ.
ದ್ರಾವಿಡ್ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ರಾಹುಲ್ ದ್ರಾವಿಡ್ ಮತ್ತೊಮ್ಮೆ ಹುದ್ದೆಯಲ್ಲಿ ಮುಂದುವರೆಯಲು ಆಸಕ್ತಿ ಹೊಂದಿಲ್ಲ ಎಂದು ವರದಿಯಾಗಿದೆ. ಅಲ್ಲದೆ ಪ್ರಸ್ತುತ ಎನ್ಸಿಎ ಅಧ್ಯಕ್ಷರಾಗಿರುವ ವಿವಿಎಸ್ ಲಕ್ಷ್ಮಣ್ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ನ ಮಾರ್ಗದರ್ಶಕರಾಗಿರುವ ಗಂಭೀರ್ ಅವರನ್ನು ಮುಖ್ಯ ಕೋಚ್ ಹುದ್ದೆಗೇರುವಂತೆ ಬಿಸಿಸಿಐ ಮನವಿ ಮಾಡಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಐಪಿಎಲ್ನಲ್ಲಿ ಕೆಕೆಆರ್ ತಂಡದ ಭಾಗವಾಗಿರುವ ಗಂಭೀರ್, ಬಿಸಿಸಿಐ ಮನವಿಯನ್ನು ಪುರಸ್ಕರಿಸುತ್ತಾರಾ ಅಥವಾ ತಿರಸ್ಕರಿಸುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಒಂದು ವೇಳೆ ಗಂಭೀರ್ ಈ ಮನವಿಗೆ ಒಪ್ಪಿದರೆ ಅವರು ಕೆಕೆಆರ್ ತಂಡವನ್ನು ತೊರೆಯಬೇಕಾಗುತ್ತದೆ. ಏಕೆಂದರೆ ಬಿಸಿಸಿಐ ಒಪ್ಪಂದಕ್ಕೆ ಒಳಪಡುವವರು ಇತರ ಲೀಗ್ಗಳಲ್ಲಿ ಕೆಲಸ ಮಾಡುವಂತಿಲ್ಲ.
ಗೌತಮ್ ಗಂಭೀರ್ಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಮಟ್ಟದಲ್ಲಿ ತರಬೇತಿ ನೀಡಿದ ಅನುಭವವಿಲ್ಲ. ಅವರು ಐಪಿಎಲ್ ಫ್ರಾಂಚೈಸಿಯಲ್ಲಿ ಕೋಚಿಂಗ್ ಸಿಬ್ಬಂದಿಯ ಉಸ್ತುವಾರಿ ವಹಿಸಿದ್ದಾರೆ. ಅವರು ಐಪಿಎಲ್ 2022 ಮತ್ತು 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ನ ಮಾರ್ಗದರ್ಶಕರಾಗಿದ್ದರು. ಪ್ರಸ್ತುತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾಗಿರುವ ಗಂಭೀರ್ ಅಡಿಯಲ್ಲಿ ಕೆಕೆಆರ್ ತಂಡದ ಪ್ರದರ್ಶನ ಅತ್ಯುತ್ತಮವಾಗಿದೆ. ಆಡಿರುವ 13 ಪಂದ್ಯಗಳಲ್ಲಿ 9 ಪಂದ್ಯಗಳಲ್ಲಿ ಗೆದ್ದಿರುವ ತಂಡ 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ 19 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಗಂಭೀರ್, 2007 ರ ಟಿ20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ವಿಜೇತ ಭಾರತೀಯ ತಂಡದ ಭಾಗವಾಗಿದ್ದರು. 2011ರ ವಿಶ್ವಕಪ್ನ ಫೈನಲ್ನಲ್ಲಿ ಅವರು 122 ಎಸೆತಗಳಲ್ಲಿ 97 ರನ್ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ಇದಲ್ಲದೆ ಗೌತಮ್ ಗಂಭೀರ್ ಐಪಿಎಲ್ ನಲ್ಲೂ ತಮ್ಮ ಸಾಮಥ್ಯ ತೊರಿದ್ದು, 2011 ರಿಂದ 2017 ರವರೆಗೆ 7 ಐಪಿಎಲ್ ಸೀಸನ್ಗಳಿಗೆ ಕೆಕೆಆರ್ ತಂಡದ ನಾಯಕತ್ವ ವಹಿಸಿದ್ದರು.