ಸಮಗ್ರ ನ್ಯೂಸ್: ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳ ಹೆಸರನ್ನು ಬದಲಾಯಿಸಿ, ಪ್ರಮುಖ ವ್ಯಕ್ತಿಗಳ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಡಾ.ಕೆ.ವಿ.ಪುಟ್ಟಪ್ಪ (ಕುವೆಂಪು) ಹಾಗೂ ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ಹೆಸರಿಡಲು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಂಡಿಸಿದ ನಿರ್ಣಯಕ್ಕೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಒಮ್ಮತದಿಂದ ಅಂಗೀಕಾರ ನೀಡಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಆರಗ ಜ್ಞಾನೇಂದ್ರ, ಕಾಂಗ್ರೆಸ್‍ನ ಅಬ್ಬಯ್ಯ ಪ್ರಸಾದ್ ಸೇರಿದಂತೆ ಹಲವರು ಸ್ವಾಗತಿಸಿದರು. ಬಿಜೆಪಿಯ ವಿ. ಸುನೀಲ್ ಕುಮಾರ್, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರಿಡಬೇಕು ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, ಮಂಗಳೂರು, ಮೈಸೂರು, ಕಲಬುರಗಿ ವಿಮಾನ ನಿಲ್ದಾಣಕ್ಕೆ ಗಣ್ಯರ ಹೆಸರಿಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.