ಸಮಗ್ರ ಸಮಾಚಾರ: ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯ ಅಧ್ಯಕ್ಷ ನೇಮಕವಾದ ಹಿನ್ನೆಲೆ ಬಿಜೆಪಿಯ ಕೆಲವು ನಾಯಕರಿಗೆ ಅಸಮಾಧಾನವಾಗಿದೆ.
ಧಾರವಾಡದಲ್ಲಿ ಹಿರಿಯ ಶಾಸಕ ಅರವಿಂದ್ ಬೆಲ್ಲದ್ ಅವರಿಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಮಾತಾಡೋಕೆ ಈ ಜಾಗ ಸೂಕ್ತವಲ್ಲ ಎಂದು ಹೇಳುತ್ತಲೇ ಮೈಕ್ಗಳನ್ನು ತಳ್ಳಿ ಹೊರಟರು. ಈ ಮೂಲಕ ಬಿವೈ ವಿಜಯೇಂದ್ರ ನೇಮಕಕ್ಕೆ ಅರವಿಂದ್ ಬೆಲ್ಲದ್ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಇನ್ನೊಂದೆಡೆ ಮಾಜಿ ಸಚಿವ ಸಿಟಿ ರವಿ ಪರೋಕ್ಷವಾಗಿ ಅಸಮಾಧಾನ ಹಾಕಿದ್ರೆ, ಶ್ರೀರಾಮುಲು ನಾನು ಅಧ್ಯಕ್ಷ ಆಗೋದು ಪಕ್ಷದ ಹಿರಿಯರ ಆಸೆ ಆಗಿತ್ತು ಅನ್ನೋ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು
ಬಿಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ಸಿಎಂ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಸಿಎಂ ಸ್ಥಾನಕ್ಕಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಕುರ್ಚಿ ಏರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೂ ಅರವಿಂದ್ ಬೆಲ್ಲದ್ ಹೆಸರು ಕೇಳಿ ಬಂದಿತ್ತು. ಆದ್ರೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಯಡಿಯೂರಪ್ಪ ಅವರ ಪುತ್ರನಿಗೆ ಒಲಿದಿರೋದು ಬೆಲ್ಲದ್ ಅಸಮಾಧಾನಕ್ಕೆ ಕಾರಣವಾಯ್ತಾ ಅನ್ನೋ ಚರ್ಚೆಗಳು ಶುರುವಾಗಿವೆ.
ಇನ್ನೂ ಅಸಮಾಧಾನಗೊಂಡಿರುವ ಮಾಜಿ ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿಗೆ ಬಿವೈ ವಿಜಯೇಂದ್ರ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತ ಯಡಿಯೂರಪ್ಪ ಅವರು ಯತ್ನಾಳ್ ಮತ್ತು ಸೋಮಣ್ಣ ಅವರಿಗೆ ಕರೆ ಮಾಡಿ ಎಲ್ಲರೂ ಒಟ್ಟಾಗಿ ಹೋಗೋಣ ಎಂದು ಹೇಳಿದ್ದಾರೆ.







