ಪ್ರಯಾಗ್ರಾಜ್: ಮೈಮೇಲೆ ಬಂದ ದುಷ್ಟ ಶಕ್ತಿ ಬಿಡಿಸುತ್ತೇವೆ ಎಂದು ಹೇಳಿ ಮಹಿಳೆಯರನ್ನು ಹಿಡಿದು ಎಳೆದಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರ ಮೈ ಮುಟ್ಟಿ, ಡ್ರಂಗಳನ್ನು ಬಾರಿಸುತ್ತಾ ಭೂತವನ್ನು ಬಿಡಿಸುತ್ತಿದ್ದ 30ಮಂದಿಯನ್ನು ಪ್ರಯಾಗ್ರಾಜ್ ಸಂಗಂ ನದಿಯ ತೀರದಿಂದ ಬಂಧಿಸಲಾಗಿದೆ.
ಬಂಧಿತರು ಮಹೋಬಾ ಮತ್ತು ಛತ್ತರಪುರ ಜಿಲ್ಲೆಗಳ ನಿವಾಸಿಗಳು ಎನ್ನಲಾಗಿದೆ. ಇವರು ಭೂತ ಬಿಡಿಸುವ ನೆಪ ಹೇಳಿ ಮಹಿಳೆಯರನ್ನು ನದಿ ತೀರಕ್ಕೆ ಕರೆತಂದು ಮೈಮುಟ್ಟಿ , ಕೂದಲು ಹಿಡಿದು ಎಳೆದಾಡಿ ಬೆತ್ತದಿಂದ ಹೊಡೆದು ಹಿಂಸೆ ನೀಡುತ್ತಿದ್ದರು. ನಿಂಬೆಹಣ್ಣು ಹಿಡಿದುಕೊಂಡು ಕುಂಕುಮ ಎರಚಿ ದುಷ್ಟ ಶಕ್ತಿಗಳನ್ನು ಓಡಿಸುವುದಾಗಿ ಹೇಳುತ್ತಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಒಟ್ಟು 30ಜನರನ್ನು ವಶಕ್ಕೆ ಪಡೆದಿದ್ದಾರೆ.