ಪ್ರೊ ಕಬಡ್ಡಿ ಲೀಗ್; ದುಬಾರಿ‌‌ ಮೊತ್ತಕ್ಕೆ ತೆಲುಗು ಟೈಟಾನ್ಸ್ ಪಾಲಾದ ಪವನ್ ಸೆರಾವತ್

ಸಮಗ್ರ ನ್ಯೂಸ್: ಭಾರತ ಕಬಡ್ಡಿ ತಂಡದ ನಾಯಕ ಪವನ್ ಸೆಹ್ರಾವತ್ ಈ ಬಾರಿಯೂ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) ಅತಿ ದುಬಾರಿ ಆಟಗಾರನೆಂಬ ದಾಖಲೆ ಬರೆದರು. ಸೋಮವಾರ ರಾತ್ರಿ ಆರಂಭವಾದ ಲೀಗ್‌ 10ನೇ ಸೀಸನ್‌ಗೆ ನಡೆದ ಹರಾಜಿನಲ್ಲಿ ತೆಲುಗು ಟೈಟನ್ಸ್‌ ತಂಡ ಈ ಅನುಭವಿ ಆಟಗಾರರನ್ನು ಪೈಪೋಟಿಯ ನಡುವೆ ₹ 2.60 ಕೋಟಿ ಮೊತ್ತಕ್ಕೆ ತನ್ನದಾಗಿಸಿಕೊಂಡಿತು.

Ad Widget ... ..

ಇರಾನ್‌ನ ಆಲ್‌ರೌಂಡರ್‌ ಮೊಹಮ್ಮದ್‌ರೇಜಾ ಶಾಡ್ಲೊಯಿ ಚಿಯೆನಾ ಹರಾಜಿನ ಆರಂಭದಲ್ಲಿ ₹2.35 ಕೋಟಿ ಮೊತ್ತಕ್ಕೆ ಪುಣೇರಿ ಪಲ್ಟನ್ಸ್‌ ತಂಡದ ಪಾಲಾಗಿ ದಾಖಲೆ ಸ್ಥಾಪಿಸಿದ್ದರು. ಆದರೆ, ದಿನದ ಕೊನೆಗೆ ಸೆಹ್ರಾವತ್‌ ದಾಖಲೆಯನ್ನು ಮತ್ತೆ ತಮ್ಮ ಹೆಸರಿಗೆ ಬರೆಸಿಕೊಂಡರು.

Ad Widget

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಪವನ್, ಹಿಂದಿನ ಋತುವಿನಲ್ಲಿ ₹2.26 ಕೋಟಿಗೆ ತಮಿಳು ತಲೈವಾಸ್ ಪಾಲಾಗಿದ್ದು, ಈ ಹಿಂದಿನ ದಾಖಲೆಯಾಗಿತ್ತು.

ಪಿಕೆಎಲ್‌ಗೆ ಚಿರಿಪರಿಚಿತರಾದ ಇರಾನ್‌ನ ಇನ್ನೊಬ್ಬ ಆಟಗಾರ, ಡಿಫೆಂಡರ್‌ ಫಝಲ್ ಅತ್ರಾಚೆಲಿ ಅವರನ್ನು ಗುಜರಾತ್‌ ಜೈಂಟ್ಸ್‌ ₹1.60 ಕೋಟಿಗೆ ಪಡೆಯಿತು. ಇದೇ ದೇಶದ ಮಹಮ್ಮದ್ ಇಸ್ಮಾಯಿಲ್‌ ನಬಿಬಕ್ಷ್ ₹22 ಲಕ್ಷಕ್ಕೆ ಗುಜರಾತ್‌ ಜೈಂಟ್ಸ್‌ಗೆ ಮಾರಾಟವಾದರು.

ಅನುಭವಿ ವಿಕಾಸ್‌ ಖಂಡೋಲ ಅವರನ್ನು ₹ 55.25 ಲಕ್ಷಕ್ಕೆ ಬೆಂಗಳೂರು ಬುಲ್ಸ್‌ ತಂಡ ತನ್ನಲ್ಲೇ ಉಳಿಸಿಕೊಂಡರೆ, ₹20 ಲಕ್ಷಕ್ಕೆ ವಿಕಾಸ್‌ ಅವರನ್ನು ತನ್ನದಾಗಿಸಿಕೊಂಡಿತು.

ಆಲ್‌ರೌಂಡರ್‌ ರೋಹಿತ್‌ ಗುಲಿಯಾ ಅವರನ್ನೂ ಗುಜರಾತ್‌ ಜೈಂಟ್ಸ್‌ 58.50 ಲಕ್ಷ ರೂಪಾಯಿಗೆ ತಂಡಕ್ಕೆ ಸೇರಿಸಿಕೊಂಡಿತು. ನಿತಿನ್ ರಾವಲ್‌ ಅವರನ್ನು ₹30 ಲಕ್ಷಕ್ಕೆ ಬೆಂಗಾಲ್ ವಾರಿಯರ್ಸ್‌ ಖರೀದಿಸಿತು.

ಆಲ್‌ರೌಂಡರ್ ವಿಜಯ್ ಮಲಿಕ್‌ ಅವರು ₹85 ಲಕ್ಷಕ್ಕೆ ಯುಪಿ ಯೋಧಾಸ್ ತಂಡದ ಪಾಲಾದರು. ರೈಡರ್‌ ಮಣಿಂದರ್‌ ಸಿಂಗ್‌ ಅವರನ್ನು ಬೆಂಗಾಲ್ ವಾರಿಯರ್ಸ್‌ ತಂಡ ₹2.12 ಕೋಟಿಗೆ ತನ್ನಲ್ಲೇ ಉಳಿಸಿಕೊಂಡಿತು. ಸಿದ್ಧಾರ್ಥ್‌ ದೇಸಾಯಿ ಅವರನ್ನು ₹ 1 ಕೋಟಿಗೆ ಹರಿಯಾಣ ಸ್ಟೀಲರ್ಸ್‌ ತಂಡ ತೆಕ್ಕೆಗೆ ಪಡೆದುಕೊಂಡಿತು.

ಇನ್ನೊಬ್ಬ ರೈಡರ್‌ ಮಂಜೀತ್‌ ₹92 ಲಕ್ಷಕ್ಕೆ ಪಟ್ನಾ ಪೈರೇಟ್ಸ್‌ ಪಾಲಾದರು. ಆಲ್‌ರೌಂಡರ್‌ ಅಕ್ರಂ ಶೇಖ್ ಅವರನ್ನು ಗುಜರಾತ್‌ ಜೈಂಟ್ಸ್‌ ₹20.25 ಲಕ್ಷಕ್ಕೆ ಉಳಿಸಿಕೊಂಡಿತು. ಆಟ‌ಗಾರರ ಹರಾಜು ಪ್ರಕ್ರಿಯೆ ಮಂಗಳವಾರವೂ ಮುಂದುವರಿಯಲಿದೆ.

Leave a Comment

Your email address will not be published. Required fields are marked *