ಸಮಗ್ರ ನ್ಯೂಸ್: ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಸಿದ್ಧತೆ ಭರದಿಂದ ಸಾಗಿದೆ. ಹಲವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಈ ನಡುವೆ ಉಡುಪಿಯ ನರ್ಸ್‌ವೊಬ್ಬರು ದೇಶಕ್ಕೆ ಮರಳಲು ನಿರಾಕರಿಸಿದ್ದಾರೆ.
‘ಭಾರತ ನನಗೆ ಜನ್ಮ ನೀಡಿತು, ಇಸ್ರೇಲ್ ಜೀವ ನೀಡಿತು; ಕಷ್ಟದ ಸಮಯದಲ್ಲಿ ಅವರೊಂದಿಗೆ ನಿಲ್ಲುತ್ತೇನೆ’ ಎಂದು ಇಸ್ರೇಲ್‌ನ ಟೆಲ್ ಅವಿವ್-ಯಾಫೊದಲ್ಲಿದ್ದು, ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಮೀಳಾ ಪ್ರಭು ಹೇಳಿದ್ದಾರೆ.
ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ರಾತ್ರಿ 8.30ರ ಸುಮಾರಿಗೆ ದಾಳಿ ಆರಂಭವಾಗಿತ್ತು. ಸೈರನ್ ಮೊಳಗುವುದನ್ನು ಕೇಳಿದ ಅವರು, ತಮ್ಮ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿರುವ ಬಂಕರ್‌ಗೆ ಆಗಮಿಸಿದ್ದರು. ಇದಾದ ಬಳಿಕ ಮನೆಯಿಂದ ಅವರು ಹೊರಗೆ ಬಂದಿಲ್ಲ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯವರಾದ ಪ್ರಮೀಳಾ 6 ವರ್ಷಗಳಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಹಿಂಸಾಚಾರ ಇಷ್ಟೊಂದು ಉಲ್ಬಣಗೊಳ್ಳುವುದನ್ನು ನಾನು ಹಿಂದೆಂದೂ ನೋಡಿಲ್ಲ ಎಂದಿದ್ದಾರೆ. “ನಾನು ಟೆಲ್ ಅವಿವ್-ಯಾಫೊದಲ್ಲಿ ವಾಸಿಸುತ್ತಿದ್ದೇನೆ, ನಾನಿರುವ ಸ್ಥಳದಲ್ಲಿ ಯುದ್ಧದ ಭೀಕರತೆ ಕಡಿಮೆ ಇದೆ. ಆದರೆ, ಶನಿವಾರ ನಾನಿರುವ ಸ್ಥಳದಿಂದ 1 ಕಿಲೋಮೀಟರ್ ಸಮೀಪದಲ್ಲಿ ಬಾಂಬ್ ಸ್ಫೋಟಗಳು ನಡೆದಿವೆ” ಎಂದಿದ್ದಾರೆ.






