ಸಮಗ್ರ ನ್ಯೂಸ್: ಪಾಕಿಸ್ತಾನದ (Pakistan) ಕರಾಚಿ (Karachi)ಯ ಸೋಲ್ಜರ್ ಬಜಾರ್ನ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಾಲಯ (Hindu Temple)ವನ್ನು ಜು. 14ರಂದು ತಡರಾತ್ರಿ ನೆಲಸಮಗೊಳಿಸಲಾಗಿದೆ.
ಬುಲ್ಡೋಜರ್ ಬಳಸಿ ತಡರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸಿ ಹೊರಗಿನ ಗೋಡೆಗಳು ಮತ್ತು ಮುಖ್ಯ ಗೇಟ್ ಅನ್ನು ಹಾಗೆಯೇ ಬಿಟ್ಟು, ಒಳಗಿನ ದೇವಾಲಯದ ಸಂಪೂರ್ಣ ರಚನೆಯನ್ನು ಕೆಡವಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಮಾರಿ ಮಾತಾ ದೇವಸ್ಥಾನವು ಮುಖಿ ಚೋಹಿತ್ರಮ್ ರಸ್ತೆಯಲ್ಲಿದ್ದು, ಸೋಲ್ಜರ್ ಬಜಾರ್ ಪೊಲೀಸ್ ಠಾಣೆಗೆ ಬಹಳ ಹತ್ತಿರದಲ್ಲಿದೆ. ಬುಲ್ಡೋಜರ್ನಿಂದ ದೇವಸ್ಥಾನ ಕೆಡವುತ್ತಿದ್ದ ವ್ಯಕ್ತಿಗಳಿಗೆ ಪೊಲೀಸರು ವ್ಯಾನ್ಗಳಲ್ಲಿ ಬಂದು ರಕ್ಷಣೆ ನೀಡಿದ್ದರು ಎಂದು ಸ್ಥಳೀಯ ಪತ್ರಿಕೆ ಡಾನ್ ವರದಿ ಮಾಡಿದೆ.
ಸ್ಥಳೀಯರಾದ ಶ್ರೀರಾಮ್ ನಾಥ್ ಮಿಶ್ರ ಮಹಾರಾಜ್ ಪ್ರತಿಕ್ರಿಯಿಸಿ, ಈ ದೇವಾಲಯವನ್ನು 150 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅದರ ಅಂಗಳದಲ್ಲಿ ಹೂತಿಟ್ಟಿರುವ ಹಳೆಯ ನಿಧಿಗಳ ಬಗ್ಗೆ ನಾವು ಕಥೆಗಳನ್ನು ಕೇಳಿದ್ದೇವೆ. ಕೆಲವು ಸಮಯದಿಂದ ಅದರ ಮೇಲೆ ಕಣ್ಣಿಟ್ಟು ಈ ಕೆಲಸ ಮಾಡಿರಬಹುದು ಎಂದು ಹೇಳಿದ್ದಾರೆ. ಈ ಮಂದಿರವು ಕರಾಚಿಯ ಮದ್ರಾಸಿ ಹಿಂದೂ ಸಮುದಾಯದ ನಿರ್ವಹಣೆಯಲ್ಲಿತ್ತು. ಅತ್ಯಂತ ಹಳೆಯ ದೇವಾಲಯವಾದ ಕಾರಣ ಸ್ವಲ್ಪ ಶಿಥಿಲಾವಸ್ತೆಗೊಂಡ ದೇವಾಲಯದ ನವೀಕರಣಕ್ಕಾಗಿ ಅಲ್ಲಿದ್ದ ಹಿಂದೂ ದೇವರ ವಿಗ್ರಹಗಳನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಲಾಗಿತ್ತು. ಆದರೆ ಜು 14 ರಂದು ರಾತ್ರಿ ಮಾರಿ ಮಾತಾ ದೇವಾಲಯವನ್ನು ಕೆಡವಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಮ್ರಾನ್ ಹಶ್ಮಿ ಮತ್ತು ರೇಖಾ ಎಕೆ ಎ ನಾಗಿನ್ ಬಾಯಿ ಎಂಬ ವ್ಯಕ್ತಿಗಳು ಈ ಸ್ಥಳವನ್ನು ತೊರೆಯುವಂತೆ ಅಲ್ಲಿನ ಹಿಂದುಗಳನ್ನು ಒತ್ತಾಯಿಸುತ್ತಿದ್ದರು. ಈ ದೇವಸ್ಥಾನದ ಸ್ಥಳವನ್ನು ಬೇರೆಯವರಿಗೆ ಮಾರಾಟ ಮಾಡಲು ಯೋಜಿಸಿದ್ದರು. ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವ ಪ್ಲಾನ್ ಇತ್ತು ಎಂದು ಮದ್ರಾಸಿ ಹಿಂದೂ ಗುಂಪಿನ ಸದಸ್ಯರೊಬ್ಬರು ಹೇಳಿದ್ದಾರೆ.
ಪಾಕಿಸ್ತಾನ-ಹಿಂದೂ ಕೌನ್ಸಿಲ್, ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ ಮತ್ತು ಸಿಂಧ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ಗೆ ಮದ್ರಾಸಿ ಹಿಂದೂ ಸಮುದಾಯ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.