ಸಮಗ್ರ ನ್ಯೂಸ್: ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರಿಗೆ ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
ಪ್ರವೀಣ್ ಹತ್ಯೆಯಾದ ಬಳಿಕ ಈ ಹಿಂದೆ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿ ವಿಶೇಷಾಧಿಕಾರ ಬಳಸಿ ಕೆಲಸ ಕೊಡಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭರವಸೆ ನೀಡಿದ್ದರು.
ಅದರಂತೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವಾಲಯದಲ್ಲಿ ಹಿರಿಯ ಸಹಾಯಕಿ (ಗ್ರೂಪ್ ಸಿ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ 2022ರ ಸೆಪ್ಟೆಂಬರ್ 22ರಂದು ಆದೇಶ ಹೊರಡಿಸಲಾಗಿತ್ತು. ಆದರೆ ಪ್ರವೀಣ್ ಪತ್ನಿ ಕುಮಾರಿ ಅವರ ವಿನಂತಿ ಮೇರೆಗೆ ಅವರಿಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಕೆಲಸ ನೀಡಲಾಗಿತ್ತು. ಕಳೆದ ಅಕ್ಟೋಬರ್ 14 ರಂದು ಅವರು ಕರ್ತವ್ಯಕ್ಕೆ ಹಾಜರಾಗಿದ್ದರು.
ಪ್ರಸಕ್ತ ಮುಖ್ಯಮಂತ್ರಿ ಇರುವ ತನಕ ಇಲ್ಲವೇ ಮುಂದಿನ ಆದೇಶದವರೆಗೆ ಎಂದು ಅವರ ನೇಮಕಾತಿ ಆದೇಶದಲ್ಲಿ ನಮೂದಿಸಲಾಗಿತ್ತು. ಅದರಂತೆ ಇದೀಗ ಸರಕಾರ ಬದಲಾಗಿದ್ದು, ನೂತನ ಕುಮಾರಿ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
‘ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ. ತಮ್ಮನ್ನು
ಮುಂದುವರೆಸಲು ನೂತನಕುಮಾರಿ ಅವರು ಕೋರಿದರೆ ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ.
2022ರ ಸೆಪ್ಟೆಂಬರ್ 22 ರಂದು ಗುತ್ತಿಗೆ ಆಧಾರದಲ್ಲಿ ಅವರನ್ನು ಕೆಲಸಕ್ಕೆ ನೇಮಿಸಲಾಗಿದ್ದು, ಈಗ ಕೆಲಸದಿಂದ ಬಿಡುಗಡೆಗೊಳಿಸಿರುವುದಾಗಿ ಆದೇಶ ನೀಡಲಾಗಿದೆ. ನೂತನ ಕುಮಾರಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಶುಕ್ರವಾರದಿಂದ ಜಾರಿಗೆ ಬರುವಂತೆ ಅವರನ್ನು ಕೆಲಸದಿಂದ ತೆಗೆದುಹಾಕಿ ಆದೇಶ ಹೊರಡಿಸಲಾಗಿದೆ. ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡು ಮುಂದುವರೆಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಲಾಗಿದೆ.