ಸಮಗ್ರ ನ್ಯೂಸ್: ಜಮೀನಿನ ರಸ್ತೆಗೆ ಸಂಬಂದಿಸಿದಂತೆ ನಡೆಯುತ್ತಿದ್ದ ವಿವಾದಕ್ಕೆ ಯುವಕನೋರ್ವನ ಬಲಿಯಾದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಚಿಕ್ಕಳ್ಳ ಗ್ರಾಮದ ಪ್ರವೀಣ್ (46 ವರ್ಷ) ಕೊಲೆಯಾದ ಯುವಕ.
ರಸ್ತೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ವಿವಾದ ನಡೆಯುತ್ತಿತ್ತು. ಮೇ.5ರ ಬೆಳಿಗ್ಗೆ ತನ್ನ ಜಮೀನಿನಲ್ಲಿ ಹಾದುಹೋಗಿದ್ದ ವಿವಾದಿತ ರಸ್ತೆಯಲ್ಲಿ ವಿರೋಧಿ ಗುಂಪಿನವರು ಕೆಲಸ ಮಾಡುತ್ತಿದ್ದಾಗ ಅದನ್ನು ಪ್ರಶ್ನಿಸಲು ಬಂದ ಪ್ರವೀಣ್ ಮೇಲೆ ಗುಂಪು ಕತ್ತಿ ಹಾರೆಯಿಂದ ಮಾರಣಾಂತಿಕವಾಗಿ ಹಲ್ಲೇ ನಡೆಸಿದ್ದರು ಎಂದು ತಿಳಿದುಬಂದಿದೆ.
ತೀವ್ರ ಗಾಯಗೊಂಡಿದ್ದ ಪ್ರವೀಣ್ ಕೊನೆಯುಸಿರೆಳೆದಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರು ಆಸ್ಪತ್ರೆ ಒಯ್ಯಲಾಗಿದೆ.
ಈ ಸಂದರ್ಭದಲ್ಲಿ ಪ್ರವೀಣ್ ಅವರ ತಂದೆ ಲಕ್ಷ್ಮಣಗೌಡ ಅವರ ಬಲಗೈಗೂ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ರಸ್ತೆಗೆ ಸಂಬಂಧಿಸಿದಂತೆ ಕೆಲ ವರ್ಷಗಳಿಂದ ವಿವಾದ ನಡೆಯುತ್ತಿತ್ತು, ಈಗ್ಗೆ ಕೆಲ ತಿಂಗಳ ಹಿಂದೆ ಪರಸ್ಪರ ಎರಡು ಕಡೆಯವರ ನಡುವೆ ಹೊಡೆದಾಟ ನಡೆದಿತ್ತು. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕು.







