ಸಮಗ್ರ ನ್ಯೂಸ್: ‘ಪರಿಸರದ ಸುಸ್ಥಿರತೆಯನ್ನು ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟನಾಗಿ, ನಿರ್ದೇಶಕನಾಗಿ ಈ ಕುರಿತಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದೇ ನನ್ನ ಉದ್ದೇಶ. ಪರಿಸರ ಪ್ರಜ್ಞೆಗೆ ಸಿನಿಮಾ ಮಾಧ್ಯಮ ಕನ್ನಡಿ ಹಿಡಿಯುತ್ತದೆ.
ಪರಿಸರ ಕುರಿತಾದ ಸಿನಿಮಾಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್, ‘ಪರಿಸರ ಸಂರಕ್ಷಣೆಗಾಗಿ ಕಳೆದ 1 ದಶಕಕ್ಕಿಂತ ಹೆಚ್ಚು ಅವಧಿಯಿಂದ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತಿರುವ ಭಾರತದ ಎಕೋ ಫಾನ್ನ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ಪರಿಸರದ ಸುಸ್ಥಿರತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ-ನಿರ್ದೇಶಕನಾಗಿ, ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದೇ ನನ್ನ ಉದ್ದೇಶ’ ಎಂದು ಹೇಳಿದರು.
ಪರಿಸರ ಸುಸ್ಥಿರತೆಯ ಶೋಧನೆಗೆ ಜಾಗತಿಕ ಏಜೆನ್ಸಿಗಳು ಹಾಗೂ ಸರ್ಕಾರದ ಸಂಸ್ಥೆಗಳು ಮುಂಚೂಣಿಯಲ್ಲಿವೆ. ಜೊತೆಗೆ ಭಾರತದಲ್ಲಿ ನಾಗರಿಕ ಸಮಾಜ ಸಹ ಸ್ಥಳೀಯ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗಿದೆ. ಇಂತಹ ಪರಿಸರ ಪ್ರಜ್ಞೆಗೆ ಸಿನಿಮಾ ಎಂಬ ಮಾಧ್ಯಮವು ಕನ್ನಡಿ ಹಿಡಿಯುತ್ತದೆ ಹಾಗೂ ವಾಸ್ತವವನ್ನು ಜಗತ್ತಿಗೆ ತೋರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹಲವಾರು ಭಾರತೀಯ ಸಿನಿಮಾಗಳು ಕಾಲ್ಪನಿಕ ಹಾಗೂ ವಾಸ್ತವ ಕತೆಗಳ ಮೂಲಕ ಪರಿಸರ ಸಂರಕ್ಷಣೆಯ ವಿಚಾರ ಹೇಳಿದ್ದು, ಈ ಕುರಿತು ಜಾಗೃತಿ ಮೂಡಿಸಿವೆ ಎಂಬುದು ನಮ್ಮ ಹೆಮ್ಮೆ’ ಎಂದು ಹೇಳಿದರು.
ಕಾಂತಾರ ಉದಾಹರಣೆ: ‘ಇತ್ತೀಚಿನ ನನ್ನ ಕಾಂತಾರ ಸಿನಿಮಾದಲ್ಲಿ ಸಹ, ನಿಸರ್ಗದ ಮಡಿಲಲ್ಲಿ ಮನುಷ್ಯನ ಜೀವನ, ಜನರ ಸ್ಥಳೀಯ ನಂಬಿಕೆ, ಆಚರಣೆ ಕುರಿತ ಪ್ರಮುಖ ಅಂಶಗಳು ಅಡಕವಾಗಿವೆ. ಪರಿಸರದ ಜತೆ ನಾವು ಹೊಂದಿರುವ ನಂಟು, ಅದು ನಮ್ಮ ಮೇಲೆ ಬೀರುವ ಪರಿಣಾಮ, ಸಹಬಾಳ್ವೆ, ಸಾಂಸ್ಕೃತಿಕ ಹಿರಿಮೆಗಳು ಹೇಗೆ ಪರಸ್ಪರ ಅವಲಂಬಿಸಿದೆ ಎಂಬುದನ್ನು ಕಾಂತಾರ ಸಿನಿಮಾ ತೋರಿಸಿದೆ. ಸ್ಥಳೀಯ ಪರಿಸರ ರಕ್ಷಣೆ, ಇದರಲ್ಲಿ ಸರ್ಕಾರದ ಪಾತ್ರ, ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮುದಾಯಗಳ ಪ್ರಾಮುಖ್ಯತೆಗಳನ್ನು ಸಿನಿಮಾ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಕಾಂತಾರದಂತಹ ಸಿನಿಮಾಗಳು ವಾಸ್ತವವನ್ನು ತೆರೆದಿಡುವ ಜತೆಗೆ ಪರಿಸರದ ಸವಾಲುಗಳನ್ನು ಎದುರಿಸಲು, ಸಮಸ್ಯೆಗಳನ್ನು ಬಗೆಹರಿಸಲು ಜನರಿಗೆ ಸ್ಫೂರ್ತಿ ನೀಡುತ್ತವೆ. ಭಾವನೆಗಳನ್ನು ಜಾಗೃತಗೊಳಿಸಿ, ಪರಿಸರ ರಕ್ಷಣೆಯತ್ತ ಜನ ತೆರಳುವಂತೆ ಮಾಡುತ್ತವೆ. ಇಂತಹ ಪ್ರಯತ್ನ, ಪರಿಶ್ರಮವನ್ನು ಗುರುತಿಸಬೇಕು, ಪ್ರೋತ್ಸಾಹಿಸಬೇಕು ಎಂಬುದಾಗಿ ಇಲ್ಲಿ ನೆರೆದಿರುವ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಅವರು ಹೇಳಿದರು.