ಸಮಗ್ರ ನ್ಯೂಸ್: ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕರಾವಳಿಯ ಎಲ್ಲ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಮಾರ್ಚ್ 18 ರವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಮಾರ್ಚ್ 16 ರಿಂದ ಮಾರ್ಚ್ 18 ರವರೆಗೆ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬುಧವಾರ(ಮಾ.15) ಚಿಕ್ಕಮಗಳೂರಿನ ಜಯಪುರದಲ್ಲಿ 3, ಬಾಳೆಹೊನ್ನೂರು 2, ಉತ್ತರಕನ್ನಡದ ಜನಮನೆ, ಕೊಡಗಿನ ಸುಂಟಿಕೊಪ್ಪ, ಶಿವಮೊಗ್ಗದ ಹುಂಚದ ಕಟ್ಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಕಲಬುರಗಿಯಲ್ಲಿ 37.5 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮಂಗಳೂರು 35.9, ರಾಯಚೂರು 36.4, ಮಂಗಳೂರು 35.9, ಬಳ್ಳಾರಿ 36.3, ವಿಜಯಪುರ 35.1, ಗದಗ 35.5, ಬೆಂಗಳೂರು 33, ಧಾರವಾಡ 34, ದಾವಣಗೆರೆ 34.5, ಚಾಮರಾಜನಗರ 35.3, ಕೊಪ್ಪಳ 35.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.